ಕೊಪ್ಪಳ: ಕೊಪ್ಪಳದ ಹಿರೇಹಳ್ಳಕ್ಕೆ ನಿರ್ಮಿಸಿರುವ ಬ್ರಿಡ್ಜ್ ಕಂ ಬ್ಯಾರೇಜ್ ಮುರಿದುಬಿದ್ದು ವರ್ಷಗಳಾದರೂ ದುರಸ್ತಿ ಕಂಡಿಲ್ಲ. ಇದರಿಂದ ರೈತರು ಸಮಸ್ಯೆ ಅನುಭವಿಸುವಂತಾಗಿದೆ.
ಹಿರೇಹಳ್ಳಕ್ಕೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿದ್ದ ಈ ಬ್ರಿಡ್ಜ್ ಕಂ ಬ್ಯಾರೇಜ್ ಈ ಭಾಗದ ಸಾವಿರಾರು ರೈತರ ನೀರಾವರಿಯ ಮೂಲವಾಗಿತ್ತು. ಜೊತೆಗೆ ಕೋಳೂರು, ಮಂಗಳಾಪುರ ಹಾಗೂ ಹೊರತಟ್ನಾಳ ಗ್ರಾಮಗಳ ಪ್ರಮುಖ ಸಂಪರ್ಕ ಸೇತುವೆ ಕೂಡ ಆಗಿತ್ತು. ಆದರೆ ಕಳೆದ 2020ರಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಿರೇಹಳ್ಳಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದ ಪರಿಣಾಮ ಈ ಬ್ರಿಡ್ಜ್ ಕಂ ಬ್ಯಾರೇಜ್ ಮುರಿದು ಬಿದ್ದಿದೆ.
ದುರಸ್ತಿ ಕಾಣದ ಬ್ರಿಡ್ಜ್ ಕಂ ಬ್ಯಾರೇಜ್ ಅಂದೇ ರೈತರು ಸಣ್ಣ ನೀರಾವರಿ ಇಲಾಖೆ ಮುಂದೆ ಇದರಿಂದಾಗಬಹುದಾದ ತೊಂದರೆಗಳನ್ನು ಹೇಳಿಕೊಂಡಿದ್ದರು. ಆ ಸಂದರ್ಭಕ್ಕೆ ಅಲ್ಲಲ್ಲಿ ಮರುಳಿನ ಚೀಲಗಳನ್ನು ಅಡ್ಡಲಾಗಿ ಹಾಕಿ ಇಲಾಖೆ ಕೈತೊಳೆದುಕೊಂಡು ಬಿಟ್ಟಿತು. ಇತ್ತೀಚೆಗೆ ಸುರಿದ ಅಕಾಲಿಕ ಮಳೆಗೆ ಮತ್ತೆ ಹಿರೇಹಳ್ಳ ತುಂಬಿ ಹರಿದ ಪರಿಣಾಮ ರೈತರ ನೂರಾರು ಎಕರೆ ಜಮೀನಿನಲ್ಲಿ ಬೆಳಿದಿದ್ದ ಬೆಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ.
ಇದನ್ನೂ ಓದಿ:ಮಂಗಳೂರು ಏರ್ಪೋರ್ಟ್ನಲ್ಲಿ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ: ಒಂದೇ ತಿಂಗಳಲ್ಲಿ ವಶಕ್ಕೆ ಪಡೆದ ಚಿನ್ನದ ಮೌಲ್ಯವೆಷ್ಟು?
ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಮಾತನಾಡಿ, ಮುರಿದು ಬಿದ್ದಿರುವ ಈ ಬ್ರಿಡ್ಜ್ ಕಂ ಬ್ಯಾರೇಜ್ ಅನ್ನು ತೆರವುಗೊಳಿಸಿ ಅಲ್ಲಿ ಹೊಸ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ 4.5 ಕೋಟಿ ರೂ.ನ ಟೆಂಡರ್ ಆಗಿದೆ. ಆದರೀಗ ಕಾಮಗಾರಿಗೆ ಬೇಕಾಗುವ ವಸ್ತುಗಳ ಬೆಲೆ ಹೆಚ್ಚಳವಾಗಿದ್ದರಿಂದ ನಿರ್ಮಾಣದ ಮೊತ್ತ ರಿವೈಸ್ ಆಗಲಿದೆ. ಆದಷ್ಟು ಬೇಗನೇ ಬ್ರಿಡ್ಜ್ ಕಂ ಬ್ಯಾರೇಜ್ ಮರು ನಿರ್ಮಾಣದ ಕಾರ್ಯ ಶುರುವಾಗಲಿದೆ ಎಂದು ತಿಳಿಸಿದ್ದಾರೆ.