ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಅನೇಕ ರೈತರು ತೋಟಗಾರಿಕೆ ಬೆಳೆಗಳತ್ತ ಚಿತ್ತ ಹರಿಸುತ್ತಿದ್ದಾರೆ. ಇದರ ನಡುವೆ ವಿಶೇಷವೆಂಬಂತೆ ಕೆಲ ರೈತರು ಔಷಧಿ ಸಸ್ಯಗಳನ್ನು ಬೆಳೆದು ಬಿಸಿಲನಾಡಿನಲ್ಲೂ ಔಷಧಿ ಸಸ್ಯಗಳನ್ನು ಬೆಳೆಯಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಜಿಲ್ಲೆಯ ಎರೆಭೂಮಿ ಪ್ರದೇಶದಲ್ಲಿ ಜಿಂಕೆಗಳ ಹಾವಳಿಗೆ ಬೇಸತ್ತು ತಮ್ಮ ಜಮೀನುಗಳನ್ನು ಬಿತ್ತನೆ ಮಾಡದೇ ಹಾಗೆಯೇ ಬಿಟ್ಟಿದ್ದ ರೈತರಿಗೆ ಈಗ ಔಷಧೀಯ ಸಸ್ಯ ಅಶ್ವಗಂಧ ವರದಾನವಾಗಿದೆ. ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ಭೀಮರಡ್ಡೆಪ್ಪ ಗದ್ದಕೇರಿ ಎಂಬವರು ಅಶ್ವಗಂಧ ಬೆಳೆದು ಇತರೆ ರೈತರಿಗೆ ಮಾದರಿಯಾಗಿದ್ದಾರೆ.
ರೈತ ಭೀಮರೆಡ್ಡೆಪ್ಪ ಗದ್ದಕೇರಿ ತಮ್ಮ ಒಟ್ಟು 7 ಎಕರೆ ಮಳೆಯಾಶ್ರಿತ ಭೂಮಿಯಲ್ಲಿ ಅಶ್ವಗಂಧ ಬೆಳೆದಿದ್ದಾರೆ. ಖಾಸಗಿ ಕಂಪನಿಯೊಂದಿಗೆ ಬೆಳೆ ಖರೀದಿ ಒಪ್ಪಂದ ಮಾಡಿಕೊಂಡು ಇವರು ಬಿತ್ತನೆ ಮಾಡಿದ್ದಾರೆ. ಬೀಜವನ್ನು ಕೊಡುವ ಕಂಪನಿಯೊಂದಿಗೆ ಅಶ್ವಗಂಧ ಸಸ್ಯವನ್ನು ಎರಡು ಹಂತದಲ್ಲಿ ಖರೀದಿ ಮಾಡುವ ಒಪ್ಪಂದ ಮಾಡಿಕೊಂಡು ಕೃಷಿ ಮಾಡಿದ್ದಾರೆ. ಬೇರುಸಹಿತ ಸಸ್ಯದ ಕಾಂಡ ಮತ್ತು ಭೂಮಿ ಮೇಲಿನ ಸಸ್ಯದ ಇತರೆ ಭಾಗವನ್ನು ಎರಡು ಹಂತದಲ್ಲಿ ಮರು ಖರೀದಿ ಮಾಡುವುದಾಗಿ ಕಂಪೆನಿ ಇವರ ಜೊತೆ ಒಪ್ಪಂದ ಮಾಡಿಕೊಂಡಿದೆ.
ಲಾಭದ ನಿರೀಕ್ಷೆ:ಇವರು 50 ಕೆಜಿ ಬೀಜ ಬಿತ್ತನೆ ಮಾಡಿದ್ದು, ಸುಮಾರು 14 ಕ್ವಿಂಟಲ್ ಕಾಂಡ ಮತ್ತು 14 ಕ್ವಿಂಟಲ್ ಸಸ್ಯದ ಮೇಲಿನ ಭಾಗದ ಫಸಲು ಬರುವ ನಿರೀಕ್ಷೆ ಇದೆ. ಒಂದು ಕ್ವಿಂಟಲ್ ಕಾಂಡವನ್ನು ಸುಮಾರು 21 ರಿಂದ 25 ಸಾವಿರ ರೂಪಾಯಿಗೆ ಮತ್ತು ಸಸ್ಯದ ಮೇಲಿನ ಫಸಲನ್ನು ಪ್ರತಿ ಕ್ವಿಂಟಲಿಗೆ 3 ರಿಂದ 4 ಸಾವಿರ ರೂಪಾಯಿಗೆ ಬೀಜ ಕೊಟ್ಟಿರುವ ಕಂಪನಿಯೇ ಮರು ಖರೀದಿ ಮಾಡುತ್ತದೆ. ಹೀಗಾಗಿ ರೈತ ಭೀಮರಡ್ಡೆಪ್ಪ ಸುಮಾರು 2 ಲಕ್ಷ ರೂಪಾಯಿ ಲಾಭ ನಿರೀಕ್ಷೆಯಲ್ಲಿದ್ದಾರೆ.