ಕೊಪ್ಪಳ:ಕೊರೊನಾ ಸೋಂಕಿನ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಕೊಪ್ಪಳ ಜಿಲ್ಲೆಯಲ್ಲಿಯೂ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಜಿಲ್ಲೆಯಲ್ಲಿ ವ್ಯಾಪಕವಾಗಿ ಸೋಂಕು ಹರಡುತ್ತಿರೋದಕ್ಕೆ ಅನೇಕ ಕಾರಣಗಳಿದ್ದು, ಆ ಪೈಕಿ ಸಣ್ಣ ಸಣ್ಣ ಮನೆಗಳಲ್ಲಿ ಸೋಂಕಿತರು ಐಸೋಲೇಷನ್ ಆಗುತ್ತಿರೋದು ಸಹ ಒಂದು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಜಿಲ್ಲೆಯಲ್ಲಿಯೂ ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡಿದೆ. ಎರಡನೇ ಅಲೆಯ ಆರಂಭದಲ್ಲಿ ಒಂದಿಷ್ಟು ದಿನನಿತ್ಯ ಎರಡಂಕಿಯಲ್ಲಿರುತ್ತಿದ್ದ ಸೋಂಕಿತರ ಸಂಖ್ಯೆ ಈಗ ಮೂರಂಕಿಗೆ ತಲುಪಿದೆ. ನಿತ್ಯವೂ ಸುಮಾರು 500ರಿಂದ 600 ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿದ್ದು, 6ರಿಂದ 8 ಮಂದಿ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ.
ಮೇ 14ರ ಮಾಹಿತಿಯ ಪ್ರಕಾರ, ಸೋಂಕಿತರ ಒಟ್ಟು ಸಂಖ್ಯೆ 24,445ಕ್ಕೇರಿದೆ. ಈ ಪೈಕಿ ಒಟ್ಟು 19,411 ಸೋಂಕಿತರು ಗುಣಮುಖರಾಗಿದ್ದಾರೆ. 413 ಜನರು ಈವರೆಗೆ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಮೊನ್ನೆಯವರೆಗೆ ಒಟ್ಟು 4,621 ಸಕ್ರಿಯ ಪ್ರಕರಣಗಳ ಪೈಕಿ 3,947 ಜನರು ಹೋಂ ಐಸೋಲೇಷನ್ನಲ್ಲಿದ್ದಾರೆ. ಇನ್ನುಳಿದಂತೆ 674 ಜನ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ವ್ಯಾಪಕವಾಗಿ ಹರಡಲು ಅನೇಕ ಕಾರಣಗಳಿಗೆ. ಅದರಲ್ಲಿ ಸಣ್ಣ ಸಣ್ಣ ಮನೆಗಳಲ್ಲಿ ಸೋಂಕಿತರು ಐಸೋಲೇಷನ್ ಆಗುತ್ತಿರೋದು ಒಂದು ಕಾರಣವಾಗಿದೆ ಎನ್ನುತ್ತಾರೆ ವೈದ್ಯರು. ಸ್ಲಂ ಪ್ರದೇಶ ಹಾಗೂ ಗ್ರಾಮೀಣ ಭಾಗದಲ್ಲಿ ಬಹುಪಾಲು ಜನರ ಮನೆಗಳು ಚಿಕ್ಕದಾಗಿರುತ್ತವೆ. ಬಹಳ ಜನರಿದ್ದು, ಸಣ್ಣ ಮನೆ ಇರುವಲ್ಲಿಯೇ ಸೋಂಕಿತರು ಹೋಂ ಐಸೋಲೇಷನ್ ಆಗುತ್ತಿದ್ದಾರೆ. ಇದರಿಂದ ಸಹಜವಾಗಿ ಸೋಂಕಿತರಿಂದ ಮನೆಯ ಇತರೆ ಸದಸ್ಯರಿಗೂ ಸೋಂಕು ಹರಡುತ್ತಿದೆ ಎನ್ನುತ್ತಾರೆ ವೈದ್ಯರು.