ಗಂಗಾವತಿ: ವಿವಿಧ ಖಾಸಗಿ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಂಗಳಿಗೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ದಿಢೀರ್ ಭೇಟಿ ನೀಡಿ, ಆಸ್ಪತ್ರೆಗಳಲ್ಲಿ ಇರುವ ವ್ಯವಸ್ಥೆ, ರೋಗಿಗಳಿಗೆ ಆಸ್ಪತ್ರೆಯಲ್ಲಿ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.
ಖಾಸಗಿ ಆಸ್ಪತ್ರೆಗಳಿಗೆ ಕೊಪ್ಪಳ ಜಿಲ್ಲಾಧಿಕಾರಿ ದಿಢೀರ್ ಭೇಟಿ ಬಳಿಕ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ವೆಂಟಿಲೇಟರ್, ಆಕ್ಸಿಜನ್ ಪೂರೈಕೆ ಯಾವ ರೀತಿ ಇದೆ. ರೋಗಿಗಳ ಚಿಕಿತ್ಸೆಗೆ ಎಷ್ಟು ವೆಚ್ಚ ತಗಲುತ್ತದೆ ಎಂಬ ಮಾಹಿತಿ ಪಡೆಯಲಾಗಿದೆ. ಕೊರೊನಾಗೆ ಚಿಕಿತ್ಸೆ ನೀಡಲು ಅವಕಾಶ ನೀಡುವಂತೆ ನಗರದ ಕೆಲ ಖಾಸಗಿ ಆಸ್ಪತ್ರೆಗಳಿಗೆ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ತಪಾಸಣೆ ನಡೆಸುವ ಉದ್ದೇಶಕ್ಕೆ ಬಂದಿದ್ದು, ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಇನ್ನು ಇದೇ ವೇಳೆ ಜಿಲ್ಲೆಯಲ್ಲಿ ನಡೆಯುತ್ತಿರುವ ಗಣಿ ಸಂಬಂಧಿತ ಅಕ್ರಮ ಚಟುವಟಿಕೆಗಳ ಕುರಿತು ಮಾತನಾಡಿದ ಅವರು, ಗಂಗಾವತಿ ಮತ್ತು ಕನಕಗಿರಿ ಸೇರಿದಂತೆ ಜಿಲ್ಲೆಯಲ್ಲಿ ಅಕ್ರಮವಾಗಿ ಮರಳು, ಕಲ್ಲು, ಮೊರಂ ಇತ್ಯಾದಿ ಸಾಗಾಣಿಕೆ ಪ್ರಕರಣಗಳು ಹೆಚ್ಚುತ್ತಿವೆ. ಗಣಿ ಮತ್ತು ಖನಿಜ ಸಂಬಂಧಿತ ಈ ಪ್ರಕರಣಗಳಿಗೆ ಶೀಘ್ರ ಕಡಿವಾಣ ಹಾಕಲಾಗುವುದು. ಎಲ್ಲೆಲ್ಲಿ ಲೀಗಲ್ ಆಗಿ ಮೈನಿಂಗ್ ಮಾಡಲು ಅವಕಾಶವಿದೆ ಅಲ್ಲಿ ಲೈಸೆನ್ಸ್ ಹಾಗೂ ಲೀಸ್ಗೆ ಅವಕಾಶ ಮಾಡಿಕೊಡಬೇಕಿತ್ತು. ಆದರೆ ಇದು ಸಕಾಲಕ್ಕೆ ಸಾಧ್ಯವಾಗಿಲ್ಲ. ಪೆಂಡೆನ್ಸಿ ಅಪ್ಲಿಕೇಷನ್ ಬಹಳ ಕಾಲದಿಂದ ವಿಲೇವಾರಿಯಾಗಿಲ್ಲ. ಇದರಿಂದಾಗಿ ಅನಧಿಕೃತ ಚಟುವಟಕೆ ನಡೆಯುತ್ತಿವೆ ಎಂದು ಹೇಳಿದರು.
ತಕ್ಷಣದಿಂದ ಎಲ್ಲಾ ಲೈಸನ್ ಮತ್ತು ಲೀಸ್ ಸಂಬಂಧಿತ ಪ್ರಕರಣಗಳನ್ನು ವಿಲೇವಾರಿ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ. ಅದಾದ ಬಳಿಕವೂ ಅಧಿಕೃತ ಲೈಸೆನ್ಸ್ ಕೊಡಲು ಸಾಧ್ಯವಾಗಿಲ್ಲವೋ ಅಲ್ಲಿ ನಾನಾ ಇಲಾಖೆಗಳ ಜಂಟಿ ಕಾರ್ಯಾಚರಣೆ ಮೂಲಕ 'ಸ್ಪಾಟ್ ಟ್ಯಾಕ್ಸ್' ಹಾಕಲು ಚಿಂತನೆ ನಡೆದಿದೆ ಎಂದರು.