ಕೊಪ್ಪಳ: ಕಳೆದ ವರ್ಷ ಕೊರೊನಾ ಭೀತಿಯಿಂದ ಮಾಡಲಾಗಿದ್ದ ಲಾಕ್ ಡೌನ್ ನಿಂದ ಕಷ್ಟ ಅನುಭವಿಸಿದ್ದ ಸಾಮಾನ್ಯ ಜನರು ಇನ್ನೂ ಚೇತರಿಸಿಕೊಂಡಿಲ್ಲ. ಈ ನಡುವೆ ಕೊರೊನಾ ಎರಡನೇ ಅಲೆ ತೀವ್ರವಾಗಿದ್ದು ಬಡವರ, ಕೂಲಿಕಾರ್ಮಿಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ನಿತ್ಯವೂ ದುಡಿಮೆ ಮಾಡಿಕೊಂಡು ಸಂಸಾರದ ಬಂಡಿ ಸಾಗಿಸುತ್ತಿದ್ದ ಜಿಲ್ಲೆಯ ಸಾಮಾನ್ಯ ಜನರು 14 ದಿನ ಕೊರೊನಾ ಕರ್ಫ್ಯೂ ಆದೇಶದಿಂದ ಕಂಗಾಲಾಗಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿರುವ ಕೊಪ್ಪಳದಲ್ಲಿ ಕೂಲಿ ಕಾರ್ಮಿಕರು ಮತ್ತೊಮ್ಮೆ ಬದುಕಿನ ಬವಣೆ ಅನುಭವಿಸುವ ಸನ್ನಿವೇಶ ಎದುರಾಗಿದೆ. ಕಳೆದ ವರ್ಷ ಹೇರಲಾಗಿದ್ದ ಲಾಕ್ ಡೌನ್ ನಿಂದ ಆದ ತೊಂದರೆಯನ್ನು ಸರಿಪಡಿಸಿಕೊಳ್ಳುವ ಹೊತ್ತಿಗೆ ಮತ್ತೆ ಕೊರೊನಾ ಎರಡನೇ ಅಲೆ ವ್ಯಾಪಕವಾಗಿದೆ. ಪರಿಣಾಮವಾಗಿ ಸೋಂಕು ಹರಡುವಿಕೆ ತಡೆಗಟ್ಟಲು ಸರ್ಕಾರ ಇಂದು 27ರ ಸಂಜೆಯಿಂದ 14 ದಿನಗಳವರೆಗೆ ಕೊರೊನಾ ಕರ್ಫ್ಯೂ ಘೋಷಿಸಿ, ಕಠಿಣ ನಿಯಮಗಳನ್ನು ಜಾರಿ ಮಾಡಿದೆ. ಇದರಿಂದಾಗಿ ಜನರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ.