ಕೊಪ್ಪಳ:ಪ್ರತಿದಿನ ಹಾಜರಾತಿ, ಪಾಠ, ತರಗತಿಗಳಲ್ಲಿ ಬ್ಯುಸಿಯಾಗಿರುವ ಶಿಕ್ಷಕರು ರಜೆ ಬರುವುದಕ್ಕೆ ಕಾಯುತ್ತಿರುತ್ತಾರೆ. ಆದರೆ ಇಲ್ಲಿರುವ ಅಧ್ಯಾಪಕರ ತಂಡವೊಂದು ರಜಾ ದಿನಗಳಲ್ಲಿ ಸರ್ಕಾರಿ ಶಾಲೆಗಳನ್ನು ಆಯ್ದುಕೊಂಡು ಸಣ್ಣಬಣ್ಣ ಮಾಡುತ್ತಾ ಗಮನ ಸೆಳೆಯುತ್ತಿದ್ದಾರೆ.
ಕೊಪ್ಪಳ ನಗರದಲ್ಲಿ ಸಮಾನವಯಸ್ಕ ಶಿಕ್ಷಕರು ಸೇರಿಕೊಂಡು 'ಕಲರವ ಕಲಾ ಬಳಗ' ಎಂಬ ಹೆಸರಿನ ತಂಡ ಕಟ್ಟಿಕೊಂಡಿದ್ದಾರೆ. ಈ ತಂಡ ರಜೆ ದಿನಗಳಲ್ಲಿ ಶ್ರಮದಾನದ ಮೂಲಕ ಸರ್ಕಾರಿ ಶಾಲೆಗಳಿಗೆ ಸುಣ್ಣ ಬಳಿಯುತ್ತಿದೆ. ಶಿಕ್ಷಣದಲ್ಲಿ ಹೊಸತನ ತರುವ ಉದ್ದೇಶವನ್ನು ಹೊಂದಿರುವ ಈ ತಂಡದಲ್ಲಿ ಬಿಆರ್ಸಿ, ಸಿಆರ್ಸಿ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರು ಸೇರಿದಂತೆ ಅನೇಕರು ಇದ್ದಾರೆ.
ರಜಾ ದಿನಗಳಲ್ಲಿ ಸರ್ಕಾರಿ ಶಾಲೆಗಳಿಗೆ ಸುಣ್ಣ-ಬಣ್ಣ ಬಳಿಯುವ ಶಿಕ್ಷಕರು ಆ.26 ರಂದು ಕೊಪ್ಪಳ ತಾಲೂಕಿನ ಇರಕಲ್ ಗಡ ಗ್ರಾಮದ ಸರಸ್ವತಿ ನಗರದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಬಣ್ಣ ಬಳಿದು ಅಂದವಾಗಿಸಿದ್ದಾರೆ. ಲಾಕ್ಡೌನ್ ಸಮಯದಲ್ಲಿ ತಾಲೂಕಿನ ಅಳವಂಡಿ ಗ್ರಾಮದ ಸಿದ್ದೇಶ್ವರ ನಗರದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣ ಸಂಪೂರ್ಣ ಕಸದಿಂದ ತುಂಬಿ ಹೋಗಿತ್ತು. ಇಂದು ಶಿಕ್ಷಕರ ತಂಡ ಸ್ವಚ್ಛತಾ ಕಾರ್ಯ ನಡೆಸಿ ಶಾಲಾ ಗೋಡೆಗೆ ಬಣ್ಣ ಬಳಿದರು. ಇದಕ್ಕಾಗಿ ಸುಮಾರು 50 ಸಾವಿರ ರೂಗಳನ್ನು ಶಿಕ್ಷಕರು ವ್ಯಯಿದ್ದಾರೆ.
ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಶಿಕ್ಷಕರ ಬಳಗ 'ನಿಮ್ಮದು ಶಾಲೆ, ನಮ್ಮ ಸೇವೆ' ಎಂಬ ಕಾರ್ಯಕ್ರಮ ಆರಂಭಿಸಿದ್ದರು. ಶಿಕ್ಷಕರ ಈ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: 'ಮುಂದಿನ ದಿನಗಳಲ್ಲಿ ಬ್ಯಾಟರಿ ಹಾಕಿ ಕಾಂಗ್ರೆಸ್ ಪಕ್ಷವನ್ನು ಹುಡುಕುವಂತಹ ಪರಿಸ್ಥಿತಿ ಬರುತ್ತೆ'