ಗಂಗಾವತಿ:ಮನೆಪಾಠ ಹೇಳಿಕೊಡುವುದಾಗಿ ಕರೆಯಿಸಿಕೊಂಡು ಅಪ್ರಾಪ್ತರು, ಮಹಿಳೆಯರಿಗೆ ವಿವಿಧ ಆಮಿಷವೊಡ್ಡಿ ಬಲೆಗೆ ಬೀಳಿಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಶಿಕ್ಷಕನಿಗೆ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜಾಮೀನು ನಿರಾಕರಿಸಿದೆ.
ಕಾರಟಗಿಯ ಅಜರುದ್ದೀನ್ ಎಂಬ ಶಿಕ್ಷಕ ತನ್ನ ಮನೆಗೆ ಬರುತ್ತಿದ್ದ ಮಕ್ಕಳಿಗೆ ಹಣ, ಚಾಕೋಲೆಟ್ ಆಮಿಷವೊಡ್ಡಿ ಅಸ್ವಾಭಾವಿಕ ಲೈಂಗಿಕತೆಗೆ ಬಳಸಿಕೊಂಡಿದ್ದಾನೆ. ಅಲ್ಲದೆ, ಬಡ ಮತ್ತು ಸಂತ್ರಸ್ತ ಹೆಣ್ಣು ಮಕ್ಕಳನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಅಲ್ಲದೇ, ವಿಕಲಚೇತನ ಮಕ್ಕಳಿಗೆ ಸರ್ಕಾರದ ಸಹಾಯ, ಯೋಜನೆಗಳನ್ನು ದೊರಕಿಸಿ ಕೊಡುವುದಾಗಿ ವಂಚಿಸುತ್ತಿದ್ದ ಶಿಕ್ಷಕ, ಲೈಂಗಿಕ ಶೋಷಣೆ ನಡೆಸಿ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿರುವ ಆರೋಪದ ಮೇಲೆ ಕಾರಟಗಿ ಠಾಣೆಯಲ್ಲಿ ಜುಲೈ 2ರಂದು ದೂರು ದಾಖಲಾಗಿದೆ.
ಪ್ರಕರಣ ಸಂಬಂಧ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಈ ಬಗ್ಗೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಂ.ಜಿ. ಶಿವಳ್ಳಿ ವಿಚಾರಣೆ ಕೈಗೊತ್ತಿಕೊಂಡು ವಾದ-ಪ್ರತಿವಾದ ಆಲಿಸಿದರು. ಬಳಿಕ ಪ್ರಕರಣದ ಸೂಕ್ಷ್ಮತೆ ಕೂಲಂಕಷವಾಗಿ ಪರಿಶೀಲಿಸಿದ ನ್ಯಾಯಾಧೀಶರು, ಆರೋಪಿ ಅಜರುದ್ದೀನ್ ಜಾಮೀನು ಅರ್ಜಿ ತಿರಸ್ಕರಿಸಿದ್ದಾರೆ ಎಂದು ಸರ್ಕಾರದ ಅಭಿಯೋಜಕಿ ನಾಗಲಕ್ಷ್ಮಿ ಎಸ್. ತಿಳಿಸಿದ್ದಾರೆ.
ಇದನ್ನೂ ಓದಿ:ಮಕ್ಕಳು-ಮಹಿಳೆಯರ ಜೊತೆ ಕೊಪ್ಪಳ ಶಿಕ್ಷಕನ ಕಾಮದಾಟದ ವಿಡಿಯೋ ವೈರಲ್.. ಟೀಚರ್ ಎಸ್ಕೇಪ್