ಕೊಪ್ಪಳ: ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಅದೆಷ್ಟೋ ಗ್ರಾಮಗಳು ಸಹ ಇನ್ನೂ ಮೂಲ ಸೌಲಭ್ಯಗಳನ್ನು ಕಂಡಿಲ್ಲ. ಅಂತಹ ಗ್ರಾಮಗಳ ಸಾಲಿಗೆ ಜಿಲ್ಲೆಯ ಈ ತಾಂಡಾ ಸಹ ಸೇರುತ್ತದೆ. ಇದು ಸಣ್ಣ ತಾಂಡಾ ಆದರೂ ಜನಪ್ರತಿನಿಧಿಗಳ ಕಣ್ಣಿಗೆ ಬೀಳದೆ ಕುಗ್ರಾಮವಾಗಿ ಉಳಿದಿದೆ. ಮಳೆಗಾಲದಲ್ಲಿ ಈ ತಾಂಡಾದ ಜನರ ಪಡುವ ಯಾತನೆ ಆ ದೇವರಿಗೆ ಪ್ರೀತಿ ಎನ್ನುವಂತಿರುತ್ತದೆ.
ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುರುಡಿ ತಾಂಡಾ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಸುಮಾರು 60-70 ಮನೆಗಳಿರುವ ಈ ತಾಂಡಾದಲ್ಲಿ ಸಮಸ್ಯೆಗಳ ಆಗರವಾಗಿದೆ. ಮುರುಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಡುವ ಮುರುಡಿ ತಾಂಡದಲ್ಲಿ ಸರಿಯಾದ ರಸ್ತೆಗಳಿಲ್ಲ, ಶುದ್ಧ ಕುಡಿಯುವ ನೀರಿನ ಸೌಲಭ್ಯವಿಲ್ಲ. ಎಲ್ಲಿ ನೋಡಿದರೂ ಕೊಚ್ಚೆ, ಕೊಳಚೆ ಕಂಡು ಬರುತ್ತದೆ.
ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುತ್ತಿರುವ ತಾಂಡ ಜನತೆ ಎಲ್ಲ ಗ್ರಾಮ ಗಳಲ್ಲಿಯೂ ಈಗ ಸಿಸಿ ರಸ್ತೆಗಳಿದ್ದರೂ ಈ ತಾಂಡಾದಲ್ಲಿ ಸಿಸಿ ರಸ್ತೆ ಮಾಡದೆ ಇರುವುದರಿಂದ ತಾಂಡಾದಲ್ಲಿ ಎಲ್ಲಿ ನೋಡಿದರೂ ಕೊಚ್ಚೆಯಾಗಿದೆ. ಇನ್ನು ಮಳೆಗಾಲ ಬಂದರೆ ಇವರ ಪಾಡು ಹೇಳತಿರದ್ದು. ಮಳೆಯಾದಾಗ ಒಂದು ಮನೆಯಿಂದ ಮತ್ತೊಂದು ಮನೆಗೆ ಹೋಗಬೇಕೆಂದರೂ ಜನರು ಕಷ್ಟಪಡುತ್ತಾರೆ.
ಇನ್ನು ಕೊಚ್ಚೆ ನೀರು ತಾಂಡದಲ್ಲಿ ಹರಿಯುವುದರಿಂದ ರೋಗಗಳ ಭೀತಿಯ ಸದಾ ತಾಂಡಾದ ಜನರನ್ನು ಕಾಡುತ್ತಿದೆ. ಸರಿಯಾದ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯ ಇರದೆ ಇರುವುದರಿಂದ ಮುರುಡಿ ತಾಂಡದ ಜನರು ಅನೇಕ ಸಂಕಷ್ಟ ಎದುರಿಸುತ್ತಿದ್ದಾರೆ.
ಅಂಗನವಾಡಿ ಇದ್ದರೂ ಅಲ್ಲಿ ಇಲ್ಲದಂತಿದೆ. ತಾಂಡಾದ ಈ ದುಸ್ಥಿತಿ ಕುರಿತಂತೆ ಗ್ರಾಮ ಪಂಚಾಯತ್ ಅಧಿಕಾರಿಗಳು, ಶಾಸಕರು ಸೇರಿದಂತೆ ಅಧಿಕಾರಿಗಳ ಗಮನಕ್ಕೆ ಸಾಕಷ್ಟು ಬಾರಿ ತಂದರೂ ಸಹ ಇತ್ತ ಗಮನ ಹರಿಸುತ್ತಿಲ್ಲ. ಚುನಾವಣೆ ಇದ್ದಾಗ ಮಾತ್ರ ಇಲ್ಲಿಗೆ ಬರುತ್ತಾರೆ. ಮತ್ತೆ ಜನಪ್ರತಿನಿಧಿಗಳು ಬರೋದು ನಂತರದ ಚುನಾವಣೆಗೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಮುರುಡಿ ತಾಂಡಾದ ನಿವಾಸಿಗಳು.
ಗ್ರಾಮಗಳಲ್ಲಿ ಈಗ ಸಿಸಿ ರಸ್ತೆ, ಶುದ್ಧ ಕುಡಿಯುವ ನೀರು ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಆದರೆ ನಮ್ಮ ಮುರುಡಿ ತಾಂಡಾಕ್ಕೆ ಮಾತ್ರ ಯಾಕೆ ಸೌಲಭ್ಯ ಕಲ್ಪಿಸುತ್ತಿಲ್ಲ. ನಮ್ಮ ತಾಂಡಾದಲ್ಲಿ ಮೊದಲು ಸಿಸಿ ರಸ್ತೆ ಮಾಡಿಸಿಕೊಡಬೇಕು. ಏಕೆಂದರೆ ಮಳೆಗಾಲದಲ್ಲಿ ಇಲ್ಲಿನ ಪರಿಸ್ಥಿತಿ ಹೇಳತೀರದಾಗುತ್ತದೆ. ರೋಗರುಜಿನಗಳ ಭಯ ಕಾಡುತ್ತದೆ. ಹೀಗಾಗಿ ಮೊದಲು ಇಲ್ಲಿ ಸಿಸಿ ರಸ್ತೆಗಳನ್ನು ಮಾಡುವುದರ ಜೊತೆಗೆ ಉಳಿದ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಮುರುಡಿ ತಾಂಡಾದ ನಿವಾಸಿಗಳು ಆಗ್ರಹಿಸಿದ್ದಾರೆ.