ಕೊಪ್ಪಳ:ಜಲಮೂಲಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಕೆರೆ ಹೂಳೆತ್ತುವ ಕಾರ್ಯಕ್ಕೆ ನಾಂದಿ ಹಾಡಿದ್ದಾರೆ. ಇದರ ಜೊತೆಗೆ ಕೊಪ್ಪಳ ತಾಲೂಕಿನಲ್ಲಿರುವ 24 ಕಿಮೀ ಉದ್ದದ ಹಿರೇಹಳ್ಳ ಪುನಶ್ಚೇತನಕ್ಕೆ ಕೈ ಹಾಕಿದ್ದು ಕೆಲಸ ಭರದಿಂದ ಸಾಗಿದೆ.
ಜಲ ಕಳೆ, ಗಿಡ-ಗಂಟೆಗಳಿಂದ ತನ್ನ ಮೂಲ ಸ್ವರೂಪವನ್ನೇ ಕಳೆದುಕೊಂಡಿದ್ದ ಹಿರೇಹಳ್ಳ ಈಗ ಹೇಗಾಗಿದೆ ಗೊತ್ತಾ? ಇದು ನಮ್ಮ ಹಿರೇಹಳ್ಳವಾ ಎಂದು ಆಶ್ಚರ್ಯ ವ್ಯಕ್ತಪಡಿಸುವ ರೀತಿಯಲ್ಲಿ ಪುನಶ್ಚೇತನಗೊಳ್ಳುತ್ತಿದೆ.
ಹೌದು, ಕೊಪ್ಪಳ ತಾಲೂಕಿನಲ್ಲಿ ಹಿರೇಹಳ್ಳ ಎಂದರೆ ಈ ಭಾಗದ ಜೀವನದಿ ಎಂಬ ಭಾವನೆ ಇತ್ತು. ತಾಲೂಕಿನ ಮುದ್ಲಾಪುರ ಗ್ರಾಮದ ಬಳಿಯಿಂದ ಆರಂಭವಾಗುವ ಹಿರೇಹಳ್ಳ ಡಂಬ್ರಳ್ಳಿ ಬಳಿಯ ತುಂಗಭದ್ರಾ ನದಿಗೆ ಸೇರುತ್ತದೆ. ಸುಮಾರು 24 ಕಿಮೀ ಉದ್ದದ ಈ ಹಿರೇಹಳ್ಳ ಮರಳು ದಂಧೆಕೋರರ ಆಕ್ರಮಣಕ್ಕೆ ನಲುಗಿ ಹೋಗಿತ್ತು. ಅಲ್ಲದೆ, ಜಲ ಕಳೆ, ಗಿಡ-ಗಂಟೆಗಳು ಬೆಳೆದು ತನ್ನ ಮೂಲ ಸ್ವರೂಪವನ್ನೇ ಕಳೆದುಕೊಂಡಿತ್ತು. ಹಳ್ಳದಲ್ಲಿ ಕಾಲಿಡೋದಕ್ಕೂ ಭಯವಾಗುತ್ತಿತ್ತು. ಹೀಗಿರುವ ಹಿರೇಹಳ್ಳ ಪುನಶ್ಚೇತನ ಮಾಡಿದರೆ ಹಳ್ಳದ ದಂಡೆಯಲ್ಲಿರುವ ಹತ್ತಾರು ಗ್ರಾಮಗಳಿಗೆ ಅನುಕೂಲವಾಗುತ್ತದೆ ಎಂದು ಯೋಚಿಸಿದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಸಾರ್ವಜನಿಕರ ಸಹಭಾಗಿತ್ವದಲ್ಲಿ ಮಾ. 1 ರಂದು ಹಿರೇಹಳ್ಳ ಪುನಶ್ಚೇತನ ಕಾರ್ಯಕ್ಕೆ ಚಾಲನೆ ನೀಡಿದ್ದರು.
ಹತ್ತಾರು ಹಳ್ಳಿಗಳಿಗೆ ಜೀವನದಿಯಾಗಿರುವ ಹಿರೇಹಳ್ಳ ಅಂದಿನಿಂದ ಆರಂಭವಾದ ಪುನಶ್ಚೇತನ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಈಗ ಈ ಪುನಶ್ಚೇತನ ಕಾರ್ಯ ಹಿರೇಹಳ್ಳದ ಸ್ವರೂಪವನ್ನೇ ಬದಲಿಸಿದೆ. ಕಳೆದ ತಿಂಗಳು ಇದ್ದ ಹಳ್ಳದ ಸ್ಥಿತಿ ಈಗ ಸಂಪೂರ್ಣ ಬದಲಾಗಿದೆ. ಹಳ್ಳದಲ್ಲಿನ ಗಿಡ-ಗಂಟೆ, ಜಲ -ಕಳೆ ತೆಗೆದು ಹಳ್ಳದ ಎರಡೂ ಬದಿಯಲ್ಲಿ ಬದು ನಿರ್ಮಾಣ ಮಾಡಲಾಗಿದೆ. ಈಗಾಗಲೇ ಬಹುತೇಕ ಸ್ವಚ್ಛಗೊಂಡಿರುವ ಹಿರೇಹಳ್ಳ, ನೋಡೋದಕ್ಕೆ ಮನಸಿಗೆ ತುಂಬಾ ಖುಷಿ ನೀಡುತ್ತಿದೆ. ಸ್ವಚ್ಛಗೊಂಡಿರುವ ಹಿರೇಹಳ್ಳದ ಪುನಶ್ಚೇತನ ಇಷ್ಟಕ್ಕೆ ಮುಗಿಯೋದಿಲ್ಲ.
ಹಳ್ಳದಲ್ಲಿ ಪ್ರತಿ ಒಂದು ಅಥವಾ ಒಂದೂವರೆ ಕಿಮೀ ಅಂತೆ ಚೆಕ್ ಡ್ಯಾಂ, ಹಳ್ಳದ ಎರಡು ಬದಿಯಲ್ಲಿ ತೆಂಗಿನ ಮರ ಹಾಗೂ ಇತರ ಮರಗಳನ್ನು ಬೆಳೆಸುವ ಯೋಜನೆ ಇದೆ. ಇದಕ್ಕಾಗಿ ಗವಿಮಠದ ಶ್ರೀಗಳು ಇತ್ತೀಚೆಗೆ ಪಂಜಾಬ್ಗೆ ಭೇಟಿ ನೀಡಿ ಅಧ್ಯಯನ ನಡೆಸಿ ಬಂದಿದ್ದಾರೆ. ಪಂಜಾಬ್ನಲ್ಲಿನ ಬಿಯಾಸ್ ನದಿಯ ಒಂದು ಟಿಸಿಲು ಕಾಲಿಗಂಜ್ ಹೆಸರಿನಲ್ಲಿ 150 ಕಿಮೀ ಹರಿಯುತ್ತದೆ. ಇಷ್ಟು ಉದ್ದ ಹರಿಯುವ ಕಾಲಿಗಂಜ್ ಜಲಮೂಲವನ್ನು ಅಲ್ಲಿನ ಸಂತ ಬಲವೀರಸಿಂಗ್ ಎನ್ನುವವರು ಪುನಶ್ಚೇತನಗೊಳಿಸಿದ್ದಾರೆ.
ಇದು ಗವಿಶ್ರೀಗಳಿಗೆ ಪ್ರೇರಣೆ ನೀಡಿ ಹಿರೇಹಳ್ಳ ಪುನಶ್ಚೇತನ ಕಾರ್ಯಕ್ಕೆ ಕೈಹಾಕುವಂತೆ ಮಾಡಿದೆ. ಈಗ ಹಿರೇಹಳ್ಳ ಪುನಶ್ಚೇತನ ಕಾರ್ಯ ಭರದಿಂದ ಸಾಗಿದೆ. ಹಳ್ಳ ನೋಡೋಕೆ ಚಂದವಾಗಿ ಕಾಣುತ್ತಿದೆ. ಅಲ್ಲಲ್ಲಿ ಚೆಕ್ ಡ್ಯಾಂ, ಎರಡೂ ಬದಿಯಲ್ಲಿ ಸಸಿಗಳು ಮರಗಳಾಗಿ ಬೆಳೆದಾಗ ಅದ್ಭುತವಾಗಲಿದೆ. ಹಳ್ಳದ ದಂಡೆಯಲ್ಲಿರುವ ಪ್ರದೇಶಗಳಿಗೆ ಅಂತರ್ಜಲ ಹೆಚ್ಚಾಗುವ ಮೂಲಕ ಅನುಕೂಲವಾಗಲಿದೆ. ಈ ಮೂಲಕ ಮಠಮಾನ್ಯಗಳಿಗೂ ಸಾಮಾಜಿಕ ಹೊಣೆಗಾರಿಕೆ ಇದೆ ಎಂಬುದನ್ನು ಕೊಪ್ಪಳದ ಗವಿಶ್ರೀಗಳು ತೋರಿಸಿಕೊಡುವ ಮೂಲಕ ಮಾದರಿಯಾಗಿದ್ದಾರೆ.