ಕೊಪ್ಪಳ: ಅಯೋಧ್ಯೆಯಲ್ಲಿ ರಾಮನ ಭವ್ಯವಾದ ಮಂದಿರ ಇದೇ ಜನವರಿ 22 ರಂದು ಲೋಕಾರ್ಪಣೆಗೊಳ್ಳಲು ಸಿದ್ಧಗೊಂಡಿದೆ. ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ದೇಶದ ನಾನಾ ಭಾಗದ ನೂರಾರು ಶಿಲ್ಪಿಗಳು ಪಾಲ್ಗೊಂಡಿದ್ದಾರೆ. ಹಾಗೆಯೇ ಕೊಪ್ಪಳ ಜಿಲ್ಲೆಯಿಂದಲೂ ಒಬ್ಬರು ಶಿಲ್ಪಿ ಮಂದಿರ ನಿರ್ಮಾಣದಲ್ಲಿ ಪಾಲ್ಗೊಂಡಿದ್ದಾರೆ. ಜಿಲ್ಲೆಯ ಯುವಶಿಲ್ಪಿ ಕಳೆದ ಒಂದು ತಿಂಗಳಿನಿಂದ ಅಯೋಧ್ಯೆಯಲ್ಲಿ ಕೆಲಸದಲ್ಲಿ ತೊಡಗಿದ್ದು, ಕುಟುಂಬದವರ ಜೊತೆಗೆ ಜಿಲ್ಲೆಯ ಜನರು ಹೆಮ್ಮೆಪಡುವಂತಾಗಿದೆ.
ಕೊಪ್ಪಳ ಜಿಲ್ಲೆಯ ಕಾತರಕಿ-ಗುಡ್ಲಾನೂರು ಗ್ರಾಮದ ಯುವಶಿಲ್ಪಿ ನಾಗಮೂರ್ತಿ ಸ್ವಾಮಿ ಎಂಬುವವರು ಕಳೆದ ಒಂದು ತಿಂಗಳ ಹಿಂದೆ ಅಯೋಧ್ಯೆಗೆ ತೆರಳಿ ರಾಮ ಮಂದಿರ ನಿರ್ಮಾಣ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ನಾಗಮೂರ್ತಿ ಸ್ವಾಮಿ ಪಾಲ್ಗೊಂಡಿರುವುದಕ್ಕೆ ಕುಟುಂಬಸ್ಥರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ರಾಮಮಂದಿರ ಕಾಯಕ ಪುಣ್ಯದ ಕಾರ್ಯ:ಅಯೋಧ್ಯೆಗೆ ತೆರಳಿರುವ ಸಹೋದರನ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿದ ವಿರೂಪಾಕ್ಷಸ್ವಾಮಿ, "ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪದಾಧಿಕಾರಿಗಳು ತಿಂಗಳ ಹಿಂದೆ ನನ್ನ ತಮ್ಮನಿಗೆ ಕರೆ ಮಾಡಿ, ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಶಿಲ್ಪ ಕಲೆಗಾರರ ಅವಶ್ಯಕತೆ ಇದೆ ಬನ್ನಿ ಎಂದು ಕರೆದರು. ನನ್ನ ತಮ್ಮ ಈ ಕೆಲಸಕ್ಕೆ ಯಾವುದೇ ಫಲಾಪೇಕ್ಷೆ ವ್ಯಕ್ತಪಡಿಸದೆ ತೆರಳಿದ್ದಾನೆ. ರಾಮ ಜಮ್ಮಭೂಮಿಯಲ್ಲಿ ಶ್ರೀರಾಮನ ಹೆಸರಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದೇ ನಮ್ಮ ಪುಣ್ಯ" ಎಂದರು.