ಕೊಪ್ಪಳ:ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ರಸ್ತೆ ಅಪಘಾತ ಪ್ರಮಾಣ ಹೆಚ್ಚುತ್ತಿದ್ದು, ಮೂರು ವರ್ಷದಲ್ಲಿ ಬರೋಬ್ಬರಿ1,722 ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿ, 648 ಜನ ಅಸುನೀಗಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ, ಕಳೆದ 2018 ರಲ್ಲಿ ಜಿಲ್ಲೆಯಲ್ಲಿ 195 ಗಂಭೀರ ಅಪಘಾತ ಪ್ರಕರಣಗಳು ಹಾಗೂ 417 ಸಾಮಾನ್ಯ ಅಪಘಾತ ಪ್ರಕರಣಗಳು ಸಂಭವಿಸಿದ್ದು, 207 ಜನ ಸಾವನ್ನಪ್ಪಿ 1001 ಜನ ಗಾಯಾಳುಗಳಾಗಿದ್ದರು.
2019ರಲ್ಲಿ 202 ಗಂಭೀರ ಅಪಘಾತ ಪ್ರಕರಣ ಹಾಗೂ 385 ಸಾಮಾನ್ಯ ಅಪಘಾತ ಪ್ರಕರಗಳು ನಡೆದು 217 ಜನರು ಮೃತಪಟ್ಟು 840 ಜನ ಗಾಯಾಳುಗಳಾಗಿದ್ದರು. 2020ರಲ್ಲಿ 212 ಗಂಭೀರ ಅಪಘಾತ ಪ್ರಕರಣ ಹಾಗೂ 311 ಸಾಮಾನ್ಯ ಅಪಘಾತ ಪ್ರಕರಣಗಳು ನಡೆದಿದ್ದು, 224 ಜನರು ಪ್ರಾಣ ಕಳೆದುಕೊಂಡು 660 ಜನರು ಗಾಯಾಳುಗಳಾಗಿದ್ದರು.
ಈ ಎಲ್ಲಾ ಅಪಘಾತ ಪ್ರಕರಣಗಳಲ್ಲಿ ಶೇಕಡಾ 90ರಷ್ಟು ಪ್ರಕರಣಗಳಲ್ಲಿ ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿ ಸವಾರರು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇನ್ನು ಶೇಕಡಾ 10ರಷ್ಟು ಪ್ರಕರಣಗಳಲ್ಲಿ ಲಘು ಮೋಟಾರು ವಾಹನಗಳ ಚಾಲಕರು, ಸೀಟ್ ಬೆಲ್ಟ್ ಧರಿಸಿದ ಕಾರಣದಿಂದ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. ಹೀಗಾಗಿ ಸಾರ್ವಜನಿಕರು, ವಾಹನಗಳ ಸವಾರರು ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸಿ ವಾಹನಗಳನ್ನು ಚಲಾಯಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಸೂಚಿಸಿದ್ದಾರೆ.