ಕೊಪ್ಪಳ: ತುಂಬು ಗರ್ಭಿಣಿಯೊಬ್ಬಳು ಮೃತಪಟ್ಟ ಘಟನೆ ನಗರದ ಜಿಲ್ಲಾಸ್ಪ್ರತೆಯಲ್ಲಿ ನಡೆದಿದ್ದು,ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂಬ ಆರೋಪ ಕೇಳಿ ಬಂದಿದೆ.
ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ ಸಾವು ಆರೋಪ - ಕೊಪ್ಪಳ ಜಿಲ್ಲಾಸ್ಪತ್ರೆ ಗರ್ಭಿಣಿ ಸಾವು ಸುದ್ದಿ
ನಗರದ ಜಿಲ್ಲಾಸ್ಪತ್ರೆಯ್ಲಲಿ ಬಳ್ಳಾರಿ ಮೂಲದ ತುಂಬು ಗರ್ಭಿಣಿ ಸಾವನ್ನಪ್ಪಿದ್ದು, ಘಟನೆಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತ ಮಹಿಳೆಯ ಸಂಬಂಧಿಕರು ಆರೋಪಿಸಿ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಕೊಗಳಿತಾಂಡಾದ ಜ್ಯೊತಿಬಾಯಿ ನಾಯ್ಕ (26) ಎಂಬ ಮಹಿಳೆ ಇಂದು ಬೆಳಗ್ಗೆ ಕೊಪ್ಪಳ ಜಿಲ್ಲಾಸ್ಪತ್ರೆಗೆ ಹೆರಿಗಾಗಿ ದಾಖಲಾಗಿದ್ದರು. ದಾಖಲಾಗಿ ಒಂದು ಗಂಟೆಯಾದರೂ ವೈದ್ಯರು ಬಂದು ನೋಡಿಲ್ಲ. ವೈದ್ಯರು ಬರುವ ವೇಳೆಗೆ ಜ್ಯೋತಿಬಾಯಿ ಮೃತಪಟ್ಟಿದ್ದಳು. ಆದರೆ ರಕ್ತದ ಕೊರತೆಯಿಂದ ಮಹಿಳೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಸಂಬಂಧಿಕರಿಗೆ ತಿಳಿಸಿದ್ದಾರಂತೆ.
ಆದರೆ, ಮಹಿಳೆ ಮೃತಪಟ್ಟಿರೋದು ವೈದ್ಯರ ನಿರ್ಲಕ್ಷ್ಯದಿಂದ. ಅಲ್ಲದೆ ರಕ್ತ ಪರೀಕ್ಷಾ ವರದಿಯನ್ನು ಸಹ ವೈದ್ಯರು ತಿದ್ದಿದ್ದಾರೆ. ಹಿಮೋಗ್ಲೋಬಿನ್ 11.6 ಇರುವುದನ್ನು 2.6 ಎಂದು ವೈದ್ಯರು ತಿದ್ದಿದ್ದಾರೆ ಎಂದು ಮೃತ ಮಹಿಳೆಯ ಸಂಬಂಧಿಕರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.