ಕೊಪ್ಪಳ: ವಾಹನಗಳ ದಾಖಲೆ ಪರಿಶೀಲಿಸುವಾಗ ಕಳ್ಳರಿಬ್ಬರು ಬೈಕ್ ಬಿಟ್ಟು ಪರಾರಿಯಾಗಿದ್ದು, ಖದೀಮರನ್ನು ಪತ್ತೆ ಹಚ್ಚಲು ಪೊಲೀಸರು ಸಿನಿಮೀಯ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿದ ಘಟನೆ ತಾಲೂಕಿನ ಅಳವಂಡಿ ಗ್ರಾಮದಲ್ಲಿ ನಡೆದಿದೆ. ಆರೋಪಿಗಳನ್ನು ಹಿಡಿಯಲು ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ್ ಅವರು ಮುಂದಾದರೂ ಸಹ ಚಾಲಾಕಿ ಕಳ್ಳರು ಎಸ್ಕೇಪ್ ಆಗಿದ್ದಾರೆ.
ತಾಲೂಕಿನ ಅಳವಂಡಿ ಗ್ರಾಮದ ಸಮೀಪ ಇಂದು ಬೆಳಿಗ್ಗೆ ಪೊಲೀಸರು ವಾಹನ ದಾಖಲೆ ಪರಿಶೀಲನೆ ಮಾಡುತ್ತಿದ್ದರು. ಆಗ ಆ ರಸ್ತೆಯಲ್ಲಿ ಯೂನಿಕಾರ್ನ್ ಬೈಕ್ ಮೇಲೆ ಬಂದ ಇಬ್ಬರು ವ್ಯಕ್ತಿಗಳು, ಪೊಲೀಸರು ಕೇಳುವ ಮೊದಲೇ ದಂಡ ಪಾವತಿಸಲು ಹೋಗಿದ್ದಾರೆ.
ಅನುಮಾನಗೊಂಡ ಪೊಲೀಸರು ಕೈಯಲ್ಲಿದ್ದ ಬ್ಯಾಗ್ ಪರಿಶೀಲನೆಗೆ ಮುಂದಾದಾಗ ತಕ್ಷಣ ಬ್ಯಾಗ್ ಬಿಟ್ಟು ಆರೋಪಿಗಳು ಓಡಿ ಹೋಗಿದ್ದಾರೆ. ಬ್ಯಾಗ್ನಲ್ಲಿ ಕಂತೆ ಕಂತೆ ನೋಟು ಪತ್ತೆಯಾಗಿವೆ. ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಹಾಗೂ ತಂಡ ಆರೋಪಿತರ ಪತ್ತೆಗೆ ಕಾರ್ಯಾಚರಣೆ ನಡೆಸಿದರು.