ಕೊಪ್ಪಳ: ಕೊರೊನಾ ಸೋಂಕು ಹರಡುತ್ತಿರುವ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಜನಜಂಗುಳಿಯನ್ನು ನಿಯಂತ್ರಣ ಮಾಡೋದು ಅತ್ಯಂತ ಮುಖ್ಯವಾದ ವಿಷಯ. ಇದಕ್ಕೆ ಡಿಜಿಟಲ್ ಮಾರುಕಟ್ಟೆಗಳು ಪೂರಕವಾಗಿ ಕೆಲಸ ಮಾಡುತ್ತಿವೆ. ಅಂತೆಯೇ ಕೊಪ್ಪಳದ ವ್ಯಕ್ತಿಯೊಬ್ಬರು 'ಕೊಪ್ಪಳ ವನ್' ಎಂಬ ವೆಬ್‍ಸೈಟ್ ರಚಿಸುವ ಮೂಲಕ ರೈತರಿಂದ ನೇರವಾಗಿ ಗ್ರಾಹಕರಿಗೆ ಉತ್ಪನ್ನಗಳನ್ನು ತಲುಪಿಸಲು ಪ್ರಯತ್ನ ನಡೆಸಿದ್ದಾರೆ.
ಜನರು ತಮಗೆ ಬೇಕಾದ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುವ ಮತ್ತು ಮಾರುಕಟ್ಟೆಗೆ ಹೋಗಿ ವಸ್ತುಗಳನ್ನು ಖರೀದಿಸುವ ಕಷ್ಟವನ್ನು ಡಿಜಿಟಲ್ ಮಾರುಕಟ್ಟೆ ತಪ್ಪಿಸಿದೆ. ಇದೇ ಡಿಜಿಟಲ್ ಮಾರುಕಟ್ಟೆಯನ್ನು ಸ್ಥಳೀಯವಾಗಿ ನಿರ್ಮಾಣ ಮಾಡುವ ಉದ್ದೇಶದಿಂದ ಕೊಪ್ಪಳದ ಶಿವಬಸವನಗೌಡ ಪಾಟೀಲ್ ಎಂಬ ಯುವಕ 'ಕೊಪ್ಪಳ ವನ್' ಎಂಬ ವೆಬ್‍ಸೈಟ್ ರಚಿಸಿ ಆ ಮೂಲಕ ಗ್ರಾಹಕರಿಗೆ ಸೇವೆ ಒದಗಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ವಿಶೇಷವೆಂದರೆ ಹಣ್ಣು, ತರಕಾರಿಯಿಂದ ಹಿಡಿದು ರೈತರು ಬೆಳೆದ ಇನ್ನಿತರೆ ಉತ್ಪನ್ನಗಳು ಗ್ರಾಹಕರಿಗೆ ಬೇಕಾದ ಸುಮಾರು 60 ವಸ್ತುಗಳನ್ನು ತನ್ನ ವೆಬ್ಸೈಟ್ನಲ್ಲಿ ಅಳವಡಿಸಿದ್ದಾನೆ. ಈಗ ಕೊರೊನಾ ಹರಡುತ್ತಿರುವ ಸಂದರ್ಭವಾಗಿರುವುದರಿಂದ ಮಾರುಕಟ್ಟೆಯಲ್ಲಿ ಜನಜಂಗುಳಿಯನ್ನು ನಿಯಂತ್ರಿಸಬೇಕಾಗಿದೆ. ಹೀಗಾಗಿ ಈ 'ಕೊಪ್ಪಳ ವನ್' ಮೂಲಕ ಗ್ರಾಹಕರಿಗೆ ಸೇವೆ ಒದಗಿಸಲಾಗುತ್ತಿದೆ.