ಕೊಪ್ಪಳ :ಕೋವಿಡ್ ಸೋಂಕು ಬಗ್ಗೆ ಸಾಮಾನ್ಯವಾಗಿ ಜನರಲ್ಲಿ ಭಯ ಆವರಿಸಿದೆ. ಇದನ್ನು ಹೋಗಲಾಡಿಸಿ ಧೈರ್ಯ ತುಂಬುವ ಸಲುವಾಗಿ ಜನರಿಗೆ ಆಪ್ತ ಸಮಾಲೋಚನೆ (Counseling) ನಡೆಸಲು ನಗರದ ಸಂಸ್ಥೆಯೊಂದು ಮುಂದಾಗಿದೆ.
ಸಂರಕ್ಷ ಸಂಸ್ಥೆಯ ಸಮಾಲೋಚಕಿ ಪದ್ಮ ಬಸವರಾಜ ಹಲವು ವರ್ಷಗಳಿಂದ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನಗರದ ಸಂರಕ್ಷ ಎಂಬ ಸಂಸ್ಥೆ ಈ ವಿಶೇಷ ಪ್ರಯತ್ನಕ್ಕೆ ಕೈ ಹಾಕಿದೆ.
ಕೋವಿಡ್ ಕುರಿತು ಜನರಿಗಿರುವ ಪ್ರಶ್ನೆಗಳು, ಲಸಿಕೆ ತೆಗೆದುಕೊಳ್ಳುವ ಕುರಿತು ಮಾಹಿತಿ, ಕೋವಿಡ್ ಬಂದರೆ ಅನುಸರಿಸಬೇಕಾದ ಕ್ರಮ, ಸೋಂಕು ತಗುಲದಂತೆ ಪಾಲಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಸಂರಕ್ಷ ಸಂಸ್ಥೆ ಜನರಿಗೆ ಸಲಹೆ ನೀಡಲಿದೆ.
ಜನರು ತಮ್ಮ ಗೊಂದಲ ನಿವಾರಿಸಿಕೊಳ್ಳಲು ಸಂರಕ್ಷ ಸಂಸ್ಥೆ ಹೆಲ್ಪ್ ಲೈನ್ ತೆರೆದಿದ್ದು, ಅಗತ್ಯವಿದ್ದವರು ಕರೆ ಮಾಡಿದರೆ ಸಂಸ್ಥೆಯ ಆಪ್ತ ಸಮಾಲೋಚಕರು ಮಾತನಾಡುತ್ತಾರೆ.
ಕೊರೊನಾ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿದೆ. ಆದರೂ, ಜನರಲ್ಲಿ ಅನೇಕ ಪ್ರಶ್ನೆಗಳು, ಸಂಶಯಗಳು ಇವೆ. ಈ ಟೆಲಿ ಕೌನ್ಸೆಲಿಂಗ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಮತ್ತು ಮಾಹಿತಿ ನೀಡುವ ಉದ್ದೇಶವನ್ನು ನಾವು ಹೊಂದಿದ್ದೇವೆ.
ಸಂಸ್ಥೆಯ ಸಿಬ್ಬಂದಿ ವರ್ಕ್ ಫ್ರಂ ಹೋಂನಲ್ಲಿಯೇ ಕರೆ ಸ್ವೀಕರಿಸಿ ಜನರಿಗೆ ಮಾಹಿತಿ ನೀಡಲಿದ್ದಾರೆ ಎಂದು ಸಂರಕ್ಷ ಸಂಸ್ಥೆಯ ಸಮಾಲೋಚಕಿ ಪದ್ಮ ಬಸವರಾಜ ತಿಳಿಸಿದ್ದಾರೆ.