ಕೊಪ್ಪಳ:ಕೊಪ್ಪಳದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಜಿಲ್ಲಾಡಳಿತ ಮತ್ತು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಜಿಲ್ಲೆಯ ಮಾವು ಬೆಳೆಗಾರರನ್ನು ಪ್ರೋತ್ಸಾಹಿಸುವ ಮತ್ತು ಜಿಲ್ಲೆಯ ಜನರಿಗೆ ವಿವಿಧ ಬಗೆಯ ಮಾವುಗಳನ್ನು ಒಂದೇ ವೇದಿಕೆಯಡಿ ಪರಿಚಯಿಸುವ ನಿಟ್ಟಿನಲ್ಲಿ ಮೇ.30 ರ ವರೆಗೆ ಮಾವು ಮೇಳವನ್ನು ಆಯೋಜಿಸಲಾಗಿದೆ.
100 ವಿಧದ ಮಾವಿನ ಹಣ್ಣುಗಳ ಪ್ರದರ್ಶನ:ಕಳೆದ ಮೂರು ವರ್ಷಗಳಿಂದ ತೋಟಗಾರಿಕೆ ಇಲಾಖೆಯು ಮಾವು ಮೇಳ ಆಯೋಜಿಸುತ್ತಾ ಬರುತ್ತಿದೆ. ಇದರಿಂದಾಗಿ ಮಾವು ಪ್ರಿಯರಿಗೆ ಹಾಗೂ ಮಾವು ಬೆಳೆದ ರೈತರಿಗೆ ಅನುಕೂಲವಾಗುತ್ತಿದೆ. ಈ ಮೇಳದಲ್ಲಿ ಅಪೋಸ್, ದಶಹರಿ, ಕೇಸರ್ ಸೇರಿದಂತೆ ನಾನಾ ಬಗೆಯ ಮಾವಿನ ಹಣ್ಣುಗಳು ಮಾರಾಟ ಮಾಡಲಾಗುತ್ತಿದೆ.
ಸಾಯವಯ ಪದ್ಧತಿಯಲ್ಲಿ ಬೆಳೆಯಲಾಗಿರುವ ಮಾವಿನ ಹಣ್ಣುಗಳು ಇಲ್ಲಿ ಲಭ್ಯವಾಗುತ್ತಿವೆ. ಮೇಳದಲ್ಲಿ ಸುಮಾರು 100 ವಿಧದ ಮಾವಿನ ಹಣ್ಣುಗಳ ಪ್ರದರ್ಶನದ ಜೊತೆಗೆ ಜಿಲ್ಲೆಯ ರೈತರು ಬೆಳೆದಿರುವ ಮಾವಿನ ಹಣ್ಣುಗಳ ಮಾರಾಟ ಈ ಮೇಳದಲ್ಲಿ ನಡೆಯುತ್ತಿರುವುದರಿಂದ ಸಹಜವಾಗಿ ಮಾವು ಪ್ರಿಯರನ್ನು ಮೇಳ ಆಕರ್ಷಿಸುತ್ತಿದೆ.
ಸಾವಯವ ಮಾವು:ಈ ಮೇಳದಲ್ಲಿ ಸಾವಯವ ಹಾಗೂ ನೈಸರ್ಗಿಕವಾಗಿ ಬೆಳೆದ ಮಾವಿನ ಹಣ್ಣುಗಳ ಮಾರಾಟ ಮಾಡಲಾಗುತ್ತಿದೆ. ಮೇಳಕ್ಕೆ ಬಂದರೆ ಮಾವಿನ ಹಣ್ಣುಗಳ ವಿವಿಧ ತಳಿಗಳ ಬಗ್ಗೆ ತಿಳಿದುಕೊಂಡು ಬೇಕಾದ ವೆರೈಟಿ ಹಣ್ಣನ್ನು ಖರೀದಿಸಬಹುದಾಗಿದೆ.