ಕೊಪ್ಪಳ :ಆತ್ಮನಿರ್ಭರ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ದೇಶಾದ್ಯಂತ ಒಂದು ಜಿಲ್ಲೆ ಒಂದು ಬೆಳೆ ಎಂದು ಘೋಷಣೆ ಮಾಡಿದೆ. ಅದರಂತೆ ಕೊಪ್ಪಳ ಜಿಲ್ಲೆಯಲ್ಲಿ ಪೇರಲ ಬೆಳೆಯನ್ನು ಆಯ್ಕೆ ಮಾಡಲಾಗಿದೆ.
ಹೀಗೆ ಘೋಷಣೆ ಮಾಡಿ ಎರಡು ವರ್ಷ ಕಳೆದರೂ ಸಹ ಜಿಲ್ಲೆಯಲ್ಲಿ ಪೇರಲ ಹಣ್ಣಿನ ಮೌಲ್ಯವರ್ಧಿತ ಉತ್ಪಾದನೆಯ ಘಟಕಗಳು ಪ್ರಾರಂಭವಾಗಿಲ್ಲ. ಹೀಗಾಗಿ, ಕೊಪ್ಪಳ ಜಿಲ್ಲೆಯ ಮಟ್ಟಿಗೆ 'ಒಂದು ಜಿಲ್ಲೆ, ಒಂದು ಬೆಳೆ' ಎಂಬ ಘೋಷಣೆ ಘೋಷಣೆಯಾಗಿಯೇ ಉಳಿದಿದೆ.
ಪೇರಲ ಹಣ್ಣಿನ ಮೌಲ್ಯವರ್ಧಿತ ಉತ್ಪನ್ನ ತಯಾರಿಕಾ ಘಟಕ ಆರಂಭಿಸಲು ಕೊಪ್ಪಳ ರೈತರ ಆಗ್ರಹ.. ಪೇರಲ ಹಣ್ಣನ್ನು ಮೌಲ್ಯವರ್ಧನೆಗೊಳಿಸುವ ಮೂಲಕ ಉತ್ತಮ ಮಾರುಕಟ್ಟೆ ವ್ಯವಸ್ಥೆಯನ್ನು ಈ ಯೋಜನೆಯಲ್ಲಿ ಕಲ್ಪಿಸಲಾಗುವ ಉದ್ದೇಶ ಇದರ ಹಿಂದೆ ಇದೆ. ಹೀಗಾಗಿ, ಒಂದು ಜಿಲ್ಲೆ ಒಂದು ಉತ್ಪನ್ನದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಪೇರಲ ಆಯ್ಕೆಯಾದ ಬಳಿಕ ಜಿಲ್ಲೆಯಲ್ಲಿ ಪೇರಲ ಬೆಳೆಯುವ ಪ್ರದೇಶ ಹೆಚ್ಚಾಗಿದೆ.
ಸೂಕ್ತ ಬೆಲೆ ಸಿಗುತ್ತಿಲ್ಲ :ಈ ಹಿಂದೆ ಜಿಲ್ಲೆಯಲ್ಲಿ 700 ಹೆಕ್ಟೇರ್ ಪ್ರದೇಶದಲ್ಲಿದ್ದ ಪೇರಲ ಬೆಳೆ ಈಗ 1000 ಹೆಕ್ಟೇರ್ ಪ್ರದೇಶಕ್ಕೆ ಏರಿಕೆಯಾಗಿದೆ. 300 ಹೆಕ್ಟೇರ್ ಪ್ರದೇಶದಲ್ಲಿ ಪೇರಲ ಬೆಳೆಯ ಪ್ರದೇಶ ಹೆಚ್ಚಾದಂತಾಗಿದೆ. ಈಗಾಗಲೇ ಪೇರಲ ಹಣ್ಣಿನ ಫಸಲು ಬರುತ್ತಿದೆ. ಇಲ್ಲಿ ಬರುತ್ತಿರುವ ಪೇರಲಕ್ಕೆ ಮಾರುಕಟ್ಟೆ ಬೇಕಾಗಿದೆ. ಬೆಳೆದಷ್ಟು ಬೆಳೆಗೆ ಸಾಕಷ್ಟು ಪ್ರಮಾಣದಲ್ಲಿ ಮಾರಾಟವಾಗುತ್ತಿಲ್ಲ. ಇದರಿಂದ ಸೂಕ್ತ ಬೆಲೆ ಸಿಗುತ್ತಿಲ್ಲ ಅಂತಾರೆ ರೈತರು.
ಯೋಜನೆಯಡಿ ಸ್ಥಳೀಯವಾಗಿ ಬೆಳೆಯುವ ಉತ್ಪನ್ನಗಳಿಗೆ ಮೌಲ್ಯವರ್ಧನೆಗೆ ಬೇಕಾಗುವ ಯಂತ್ರಗಳು ಹಾಗೂ ಮಾರುಕಟ್ಟೆ ಒದಗಿಸುವ ಕೆಲಸವಾಗಬೇಕು. ಪೇರಲ ಬೆಳೆಗಾರರು ಗುಂಪುಗಳನ್ನಾಗಿ ಮಾಡಿಕೊಂಡು ಬೆಳೆಯ ಮೌಲ್ಯವರ್ಧನೆಗೆ ಮುಂದಾಗಬೇಕಾಗಿದೆ. ಆದರೆ, ಇಲ್ಲಿಯವರೆಗೂ ಯಾವ ಕೆಲಸವೂ ಆಗಿಲ್ಲ. ಈವರೆಗೆ ಒಂದೆರಡು ಬಾರಿ ರೈತರಿಗೆ ತರಬೇತಿಯಾಗಿದೆ. ಆದರೆ, ರೈತರಿಗೆ ಸಾಲ ನೀಡಿ ಮೌಲ್ಯವರ್ಧನೆಗೆ ಅವಕಾಶ ನೀಡಲು ಬ್ಯಾಂಕುಗಳು ಮುಂದೆ ಬಂದಿಲ್ಲ.
ಈ ಬಗ್ಗೆ ರೈತರನ್ನು ಕೇಳಿದರೆ, ಅಲ್ಲಲ್ಲಿ ತರಬೇತಿ ಪಡೆದು ಪೇರಲ ಮೌಲ್ಯವರ್ಧನೆಗೆ ಮುಂದಾಗುತ್ತೇವೆ. ಬ್ಯಾಂಕುಗಳು ಸಹಕಾರ ನೀಡಬೇಕೆಂದು ಹೇಳಿದ್ದಾರೆ. ಕೊರೊನಾ ಸೋಂಕಿನ ಭೀತಿಯ ಕಾರಣಕ್ಕಾಗಿ ತರಬೇತಿ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕಾ ಘಟಕ ಆರಂಭಿಸಲು ವಿಳಂಬವಾಗಿದೆ. ಮುಂಬರುವ ದಿನಗಳಲ್ಲಿ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ವೇಗ ಪಡೆಯಲಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕೃಷ್ಣ ಉಕ್ಕುಂದ ತಿಳಿಸಿದ್ದಾರೆ.
2020 ರಿಂದ 2025ರವರೆಗೆ ಒಂದು ಬೆಳೆ ಒಂದು ಜಿಲ್ಲೆ ಯೋಜನೆಗೆ ರಾಜ್ಯ ಸರ್ಕಾರ 100 ಕೋಟಿ ರೂ.ಖರ್ಚು ಮಾಡಲಿದೆ. ಈವರೆಗೂ ಕೊರೊನಾ ನೆಪ ಹೇಳಿ ಪೇರಲ ಬೆಳೆಯ ಮೌಲ್ಯವರ್ಧನೆ ವಿಳಂಬವಾಗಿದೆ. ಇನ್ನು ಮುಂದಾದರೂ ಯೋಜನೆ ವೇಗ ಪಡೆದುಕೊಂಡು ಆದಷ್ಟು ಶೀಘ್ರ ಕಾರ್ಯರೂಪಕ್ಕೆ ಬರಲಿ ಎಂಬುದು ರೈತರ ಆಗ್ರಹವಾಗಿದೆ.