ಕೊಪ್ಪಳ: ಜಿಲ್ಲೆಯ ರೈತನ ಮಗನೊಬ್ಬ ಯುಪಿಎಸ್ಸಿ ಪರೀಕ್ಷೆಯಲ್ಲಿ 646ನೇ ಸ್ಥಾನ ಪಡೆದಿದ್ದಾರೆ. ಜಿಲ್ಲೆಯ ಕುಷ್ಟಗಿ ತಾಲೂಕಿನ ಕಂದಕೂರು ಗ್ರಾಮದ ಯಮನಪ್ಪ ಹಾಗೂ ಹುಲಿಗೆಮ್ಮ ಎಂಬ ರೈತ ದಂಪತಿಯ 3ನೇ ಮಗನಾಗಿರುವ ರಮೇಶ ಗುಮಗೇರಿ ಎಂಬುವರು ಯುಪಿಎಸ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿ ಜಿಲ್ಲೆಗೆ ಹಾಗೂ ಗ್ರಾಮಕ್ಕೆ, ಹೆತ್ತವರಿಗೆ ಕೀರ್ತಿ ತಂದಿದ್ದಾರೆ.
ರಮೇಶ ಗುಮಗೇರಿ ಅವರು ತಮ್ಮ 5ನೇ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಕಂದಕೂರು ಗ್ರಾಮದಲ್ಲಿ ಹಾಗೂ ಹೈಸ್ಕೂಲ್ ಶಿಕ್ಷಣವನ್ನು ನಿಡಶೇಸಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪೂರೈಸಿದ್ದಾರೆ. ಅಲ್ಲದೆ ಪಿಯುಸಿಯನ್ನು ಧಾರವಾಡದಲ್ಲಿ, ಎಂಜಿನಿಯರಿಂಗ್ ಶಿಕ್ಷಣವನ್ನು ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪೂರೈಸಿದ್ದಾರೆ. ಎಂ.ಟೆಕ್ ಪದವೀಧರರಾಗಿರುವ ರಮೇಶ ಗುಮಗೇರಿ ಅವರು, ಯುಪಿಎಸ್ಸಿ ಪರೀಕ್ಷೆ ಬರೆದು ಸಾಧನೆಗೈದಿದ್ದಾರೆ.