ಗಂಗಾವತಿ(ಕೊಪ್ಪಳ):ತುಂಗಭದ್ರಾ ನದಿಯ ದಡಗಳಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ಅನಧಿಕೃತ ರೆಸಾರ್ಟ್, ಹೋಂ ಸ್ಟೇ ಸೇರಿದಂತೆ ವಾಣಿಜ್ಯ ಚಟುವಟಿಕೆಯ ಘಟಕಗಳನ್ನು ನೆಲಸಮ ಮಾಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಸಂಗಾಪುರ, ಮಲ್ಲಾಪುರ ಹಾಗೂ ಸಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅನಧಿಕೃತ ರೆಸಾರ್ಟ್, ಹೋಂ ಸ್ಟೇಗಳ ತೆರವಿಗೆ ಸಿಬ್ಬಂದಿ ಮತ್ತು ವಾಹನ, ಸಲಕರಣೆಗಳ ವ್ಯವಸ್ಥೆ ಮಾಡಿ ಸಿದ್ಧವಿಟ್ಟುಕೊಳ್ಳುವಂತೆ ಜಿಲ್ಲಾಡಳಿತ ಈಗಾಗಲೇ ಸೂಚನೆ ನೀಡಿದೆ.
ಹಂಪಿ ಅಭಿವೃದ್ಧಿ ಪ್ರಾಧಿಕಾರ ನೀಡಿರುವ ನಿರ್ದೇಶನದ ಮೇರೆಗೆ ಜಿಲ್ಲಾಡಳಿತ ಈ ಬಗ್ಗೆ ಸ್ಥಳೀಯ ತಹಶೀಲ್ದಾರ್, ಪೊಲೀಸ್ ಮತ್ತು ಆಯಾ ಪಂಚಾಯಿತಿಗಳ ಅಧಿಕಾರಿಗಳಿಗೆ ಸೂಚನೆ ರವಾನಿಸಿದೆ. ಜಿಲ್ಲಾಡಳಿತದ ಸೂಚನೆಯಂತೆ ನಾವು ಎಲ್ಲ ಸಿದ್ಧತೆಗಳನ್ನು ಮಾಡಿಟ್ಟುಕೊಂಡಿದ್ದೇವೆ. ಮೇಲಧಿಕಾರಿಗಳು ನೀಡುವ ಸೂಚನೆ ಮೆರೆಗೆ ಸೋಮವಾರ ಕಾರ್ಯ ಪ್ರವೃತ್ತರಾಗುತ್ತೇವೆ ಎಂದು ತಹಶೀಲ್ದಾರ್ ಮಂಜುನಾಥ ಹಿರೇಮಠ ತಿಳಿಸಿದ್ದಾರೆ.
ನ್ಯಾಯಾಂಗ ನಿಂದನೆ: ತುಂಗಭದ್ರಾ ನದಿಯ ಎರಡು ಭಾಗದಲ್ಲಿ ಅಂದರೆ ಹಂಪಿ ಅಭಿವೃದ್ಧಿ ಪ್ರಾಧಿಕಾರ (ಹವಾಮ) ವ್ಯಾಪ್ತಿಯಲ್ಲಿ ಬರುವ ಯುನೆಸ್ಕೋ ವಿಶ್ವ ಪರಂಪರೆಯ ತಾಣದಲ್ಲಿ ಯಾವುದೇ ಚಟುವಟಿಕೆ ನಡೆಯಬಾರದು ಎಂಬ ಆದೇಶವಿದೆ. ಆದರೆ ನ್ಯಾಯಾಲಯದ ಆದೇಶ ಮೀರಿ ಇಲ್ಲಿ ರೆಸಾರ್ಟ್, ಹೋಂಸ್ಟೇ, ವಾಣಿಜ್ಯ ಚಟುವಟಿಕೆ ನಡೆಯಲು ಅವಕಾಶ ನೀಡುವ ಮೂಲಕ ಹಂಪಿ ಅಭಿವೃದ್ಧಿ ಪ್ರಾಧಿಕಾರ ನ್ಯಾಯಾಂಗ ನಿಂದನೆ ಮಾಡಿದೆ ಎಂದು ಹೊಸಪೇಟೆಯ ಕಲ್ಯಾಣ ಕೇಂದ್ರದ ಕೊಟ್ಟೂರು ಸ್ವಾಮಿ ಎಂಬುವವರು ನ್ಯಾಯಾಲಯದ ಮೊರೆ ಹೋಗಿದ್ದರು. ಹೀಗಾಗಿ ನ್ಯಾಯಾಲಯದಿಂದ ಖಡಕ್ ಆದೇಶ ಜಾರಿಯಾಗುತ್ತಲೆ ಎಚ್ಚೆತ್ತ ಹವಾಮಾ ಅಧಿಕಾರಿಗಳು ಜೂ.12ರಂದು ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲಾಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿ ಅನಧಿಕೃತ ಚಟುವಟಿಕೆಗೆ ಬ್ರೇಕ್ ಹಾಕಲು ಸೂಚನೆ ನೀಡಿದ್ದಾರೆ.