ಗಂಗಾವತಿ :ಜನರ ಸಮಸ್ಯೆ ಆಲಿಸುವ ಉದ್ದೇಶದಿಂದ ಸರ್ಕಾರ 'ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ' ಎಂಬ ಯೋಜನೆಯನ್ನು ಹಮ್ಮಿಕೊಂಡಿದೆ. ಗ್ರಾಮ ವಾಸ್ತವ್ಯಕ್ಕೆಂದು ಹೋಗಿದ್ದ ಜಿಲ್ಲಾಧಿಕಾರಿಯನ್ನು ಗ್ರಾಮಸ್ಥರು ನೇರವಾಗಿ ಸ್ಮಶಾನಕ್ಕೆ ಕರೆದೊಯ್ದ ಘಟನೆ ತಾಲೂಕಿನಲ್ಲಿ ನಡೆಯಿತು.
ಗ್ರಾಮವಾಸ್ತವ್ಯಕ್ಕೆಂದು ಬಂದ ಡಿಸಿಯನ್ನು ಸ್ಮಶಾನಕ್ಕೆ ಕರೆದೊಯ್ದ ಗ್ರಾಮಸ್ಥರು.. ತಾಲೂಕಿನ ಹಣವಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಅತ್ಯಂತ ಹಿಂದುಳಿದ ಗುಳದಾಳ ಮಸಾರಿ ಕ್ಯಾಂಪಿನಲ್ಲಿ ವಾಸ್ತವ್ಯ ಹೂಡಲು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಗ್ರಾಮಸ್ತರು ನೇರವಾಗಿ ಡಿಸಿ ಸೇರಿ ಜಿಲ್ಲಾ ಹಂತದ ವಿವಿಧ ಇಲಾಖೆಯ ಅಧಿಕಾರಿಗಳನ್ನು ಗ್ರಾಮದ ಸಾರ್ವಜನಿಕ ರುದ್ರಭೂಮಿಗೆ ಕರೆದೊಯ್ದರು.
60 ವರ್ಷದಿಂದ ಊರಿಗೆ ರುದ್ರಭೂಮಿಯಿಲ್ಲ. ಅಂತ್ಯಕ್ರಿಯೆ ನಡೆಸಲು ತೀವ್ರ ಸಮಸ್ಯೆಯಾಗುತ್ತಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು. ಕೂಡಲೇ ಸ್ಪಂದಿಸಿದ ಜಿಲ್ಲಾಧಿಕಾರಿ, ಅಳತೆ ಮಾಡಿ ನರೇಗಾದಲ್ಲಿ ಬೌಂಡರಿ ಫಿಕ್ಸ್ ಮಾಡಿ ಕೊಡುವಂತೆ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬಳಿಕ ಗ್ರಾಮದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮಕ್ಕೆ ಶಾಸಕ ಬಸವರಾಜ ದಢೇಸ್ಗೂರು ಚಾಲನೆ ನೀಡಿದರು. ಜಿಲ್ಲಾ ಪಂಚಾಯತ್ ಸಿಇಒ ಫೌಜೀಯಾ ತರುನ್ನುಮ್, ಸಹಾಯಕ ಆಯುಕ್ತ ನಾರಾಯಣ ಕನಕರೆಡ್ಡಿ ಸೇರಿ ವಿವಿಧ ಇಲಾಖೆಯ ಜಿಲ್ಲಾ ಹಂತದ ಅಧಿಕಾರಿಗಳಿದ್ದರು.