ಕೊಪ್ಪಳ :ಕೊರೊನಾ ಭೀತಿಯಿಂದ ಆಗಿರುವ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾಗಿರುವ ಜನರ ನೆರವಿಗೆ ಅನೇಕರು ಧಾವಿಸುತ್ತಿದ್ದಾರೆ. ಜನರಿಗೆ ವಿತರಿಸಲು ಜಿಲ್ಲಾಡಳಿತಕ್ಕೆ ಈವರೆಗೆ 6000 ಆಹಾರ ಸಾಮಾಗ್ರಿ ಕಿಟ್ಗಳು ಬಂದಿವೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್ ತಿಳಿಸಿದ್ದಾರೆ.
ಸರ್ಕಾರದ ಮೂಲಕ ಅರ್ಹರಿಗೆ ಈಗಾಗಲೇ ರೇಷನ್ ಹಂಚಿಕೆ ಮಾಡಲಾಗಿದೆ. ಇದರ ಜತೆಗೆ ಇಳಕಲ್ ತಾಲೂಕಿನ ಗ್ರಾನೈಟ್ ಅಸೋಷಿಯೇಷನ್ ವತಿಯಿಂದ ಒಟ್ಟು 5000 ಆಹಾರ ಸಾಮಾಗ್ರಿ ಕಿಟ್‌ಗಳನ್ನು ನೀಡಿದ್ದಾರೆ. ಆ ಪೈಕಿ 3000 ಕಿಟ್‌ಗಳನ್ನು ನೇರವಾಗಿ ಕುಷ್ಟಗಿ ತಾಲೂಕಿನಲ್ಲಿ ಅರ್ಹ ಕಡುಬಡವ ಕುಟುಂಬಗಳಿಗೆ ಹಂಚಿದ್ದಾರೆ.
ದೇಣಿಗೆಯಾಗಿ ಬಂದಿರುವ ಆಹಾರ ಸಾಮಾಗ್ರಿ ಕಿಟ್ ಬಗ್ಗೆ ಕೊಪ್ಪಳ ಡಿಸಿ ಮಾಹಿತಿ ಇನ್ನುಳಿದ 2 ಸಾವಿರ ಕಿಟ್‌ಗಳನ್ನು ಜಿಲ್ಲಾಡಳಿತಕ್ಕೆ ದೇಣಿಗೆ ರೂಪದಲ್ಲಿ ಬಂದಿದೆ. ಇದರ ಜೊತೆಗೆ ಜಿಲ್ಲೆಯ ವಿವಿಧ ಕಂಪನಿಗಳು ದೇಣಿಗೆ ರೂಪದಲ್ಲಿ 4 ಸಾವಿರ ಆಹಾರ ಕಿಟ್ ದೇಣಿಗೆ ನೀಡಿವೆ. ಒಟ್ಟು 6000 ಆಹಾರ ಸಾಮಾಗ್ರಿ ಕಿಟ್‌ನ ಕೊಪ್ಪಳ, ಗಂಗಾವತಿ, ಕನಕಗಿರಿ, ಯಲಬುರ್ಗಾ ವಿಧಾನಸಭಾ ಕ್ಷೇತ್ರಕ್ಕೆ ತಲಾ ಒಂದು ಸಾವಿರ ಕಿಟ್ ಹಾಗೂ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಒಂದು ಸಾವಿರ ಕಿಟ್ ನೀಡಲಾಗಿದ್ದು, ಅರ್ಹರಿಗೆ ಹಂಚಿಕೆ ಮಾಡಲು ಕ್ರಮಕೈಗೊಳ್ಳಲಾಗಿದೆ.
ಇನ್ನುಳಿದ ಒಂದು ಸಾವಿರ ಕಿಟ್‌ಗಳನ್ನು ಕಾಯ್ದಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್ ಮಾಹಿತಿ ನೀಡಿದ್ದಾರೆ.