ಗಂಗಾವತಿ:ಅಂಜನಾದ್ರಿ ಬೆಟ್ಟದ ಸುತ್ತಲೂ ಚಿರತೆ, ಕರಡಿಯಂತ ವನ್ಯ ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಅಲ್ಲದೆ ಕೊರೊನಾದ ಎರಡನೇ ಅಲೆ ವ್ಯಾಪಕ ಪ್ರಮಾಣದಲ್ಲಿ ವ್ಯಾಪಿಸುತ್ತಿದ್ದು, ಹನುಮ ಮಾಲಾ ವಾರ್ಷಿಕ ಕಾರ್ಯಕ್ರಮಕ್ಕೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ವಿಕಾಶ್ ಕಿಶೋರ್ ಸುರಾಳ್ಕರ್ ತಿಳಿಸಿದ್ದಾರೆ.
ಪ್ರತಿ ವರ್ಷ ವಿಜೃಂಭಣೆಯಿಂದ ನಡೆಯುತ್ತಿದ್ದ ಹನುಮ ಜಯಂತಿ ಹಾಗೂ ಹನುಮ ಮಾಲೆ ವಿಸರ್ಜನೆಗೆ ಅಂಜನಾದ್ರಿ ಬೆಟ್ಟದಲ್ಲಿ ಅವಕಾಶ ನೀಡುವಂತೆ ಕೋರಿ ನಾನಾ ಸಂಘಟನೆಗಳು, ಹಿಂದು ಸಮುದಾಯದ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
ಮನವಿಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ವಿಕಾಶ್ ಕಿಶೋರ್ ಸುರಾಳ್ಕರ್, ಅಂಜನಾದ್ರಿ ಬೆಟ್ಟದ ಸುತ್ತಲೂ ಚಿರತೆ, ಕರಡಿಯಂತ ವನ್ಯ ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಅಲ್ಲದೇ ಕೊರೊನಾದ ಎರಡನೇ ಅಲೆ ವ್ಯಾಪಕ ಪ್ರಮಾಣದಲ್ಲಿ ವ್ಯಾಪಿಸುತ್ತಿದೆ.
ಈ ಹಿನ್ನೆಲೆ ಡಿ. 27ರಂದು ಹನುಮ ಮಾಲೆ ವಿಸರ್ಜನೆಗೆ ಅವಕಾಶ ಮಾಡಿಕೊಟ್ಟಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ ಸಾವಿರಾರು ಜನ ಸೇರುವ ಆತಂಕವಿದ್ದು, ಇದು ಕೊರೊನಾ ಮತ್ತಷ್ಟು ಹರಡಲು ಕಾರಣವಾಗುವ ಹಿನ್ನೆಲೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆದೇಶದ ಮಧ್ಯೆಯೂ ಭಕ್ತಾದಿಗಳು ಬೆಟ್ಟಕ್ಕೆ ಆಗಮಿಸಿ ಹನುಮ ಮಾಲೆ ವಿಸರ್ಜನೆ ಮಾಡುವುದು, ಬೆಟ್ಟದ ಸುತ್ತಲೂ ಪರಿಕ್ರಮ ಕೈಗೊಳ್ಳುವುದು, ಪಲ್ಲಕ್ಕಿ ಉತ್ಸವ, ಹೋಮ, ಹವನ ಮಾಡುವ ಸಾಧ್ಯತೆಗಳಿರುವ ಕಾರಣಕ್ಕೆ ನಿರ್ಬಂಧ ಹೇರಿ ಸೂಕ್ತ ಕ್ರಮ ಕೈಗೊಳ್ಳುವಂತೆ ಡಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದ್ದಾರೆ.