ಕೊಪ್ಪಳ:ಸುಪ್ರಿಂಕೋರ್ಟ್ ಆದೇಶದಂತೆ ಸರ್ಕಾರಿ ಪ್ರಾಥಮಿಕ ಶಾಲೆಗಳ ಆಯಾಗಳಿಗೆ ಪರಿಷ್ಕೃತ ವೇತನವನ್ನು ನೀಡಬೇಕು. ಆದರೆ, ಕೊಪ್ಪಳ ತಾಲೂಕಿನ ಆಯಾಗಳಿಗೆ ಇಲ್ಲಿನ ಬಿಇಒ ಸರಿಯಾಗಿ ವೇತನ ನೀಡದೆ ಸತಾಯಿಸುತ್ತಿದ್ದಾರೆ ಎಂದು ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲೆಗಳ ಆಯಾಗಳ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಮಹೇಶ ಕುಮಾರ್ ಆರೋಪಿಸಿದ್ರು.
ಆಯಾಗಳಿಗೆ ವೇತನ ನೀಡದೆ ಬಿಇಒ ಸತಾಯಿಸುತ್ತಿದ್ದಾರೆ: ಎಂ ಮಹೇಶ್ ಕುಮಾರ್ ಆರೋಪ - supreme court order
ಆಯಾಗಳನ್ನು ಡಿ ದರ್ಜೆ ನೌಕರರನ್ನಾಗಿ ಪರಿಗಣಿಸಬೇಕು ಎಂದು ನ್ಯಾಯಾಲಯ ಆದೇಶ ಮಾಡಿದೆ. ಆದರೆ, ನ್ಯಾಯಾಲಯದ ಆದೇಶವನ್ನು ಶಿಕ್ಷಣ ಇಲಾಖೆ ಪಾಲಿಸುತ್ತಿಲ್ಲ ಎಂದು ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲೆಗಳ ಆಯಾಗಳ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಮಹೇಶ ಕುಮಾರ್ ಆರೋಪಿಸಿದ್ರು.
ನಗರದ ಮೀಡಿಯಾ ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಮಾರು 40 ವರ್ಷಗಳಿಂದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಡಿಮೆ ಸಂಬಳಕ್ಕೆ ಆಯಾಗಳನ್ನು ದುಡಿಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋಗಲಾಗಿತ್ತು. ಸುಪ್ರಿಂಕೋರ್ಟ್ ಕೂಡ ಆಯಾಗಳ ಪರವಾಗಿಯೇ ತೀರ್ಪು ನೀಡಿದೆ. ಆ ನಂತರ ರಾಜ್ಯದ ಎಲ್ಲ ತಾಲೂಕಿನಲ್ಲೂ 6 ನೇ ವೇತನ ಆಯೋಗದ ಪ್ರಕಾರ, ಆಯಾಗಳಿಗೆ ಸಂಬಳ ನೀಡಲಾಗಿದೆ. ಆದರೆ, ಕೊಪ್ಪಳ ತಾಲೂಕಿನಲ್ಲಿರುವ 13 ಜನ ಆಯಾಗಳಿಗೆ ಮಾತ್ರ ಪರಿಷ್ಕೃತ 17 ಸಾವಿರ ರೂಪಾಯಿ ಸಂಬಳ ನೀಡದೆ ಇಲ್ಲಿನ ಬಿಇಓ ಸತಾಯಿಸುತ್ತಿದ್ದಾರೆ ಎಂದು ಅವರು ದೂರಿದ್ರು.
ಅಷ್ಟೇ ಅಲ್ಲದೇ, ಆಯಾಗಳನ್ನು ಡಿ ದರ್ಜೆ ನೌಕರರನ್ನಾಗಿ ಪರಿಗಣಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಆದರೆ, ನ್ಯಾಯಾಲಯದ ಆದೇಶವನ್ನು ಶಿಕ್ಷಣ ಇಲಾಖೆ ಪಾಲಿಸುತ್ತಿಲ್ಲ. 60 ವರ್ಷ ವಯಸ್ಸಾಗಿರುವ ಆಯಾಗಳನ್ನು ಹಾಗೆಯೇ ಕೆಲಸದಿಂದ ರಿಲೀವ್ ಮಾಡಲಾಗುತ್ತಿದೆ. ಇದು ನ್ಯಾಯಾಲಯದ ನಿಂದನೆಯಾಗುತ್ತದೆ ಎಂದು ಎಂ. ಮಹೇಶ್ ಕುಮಾರ್ ಎಚ್ಚರಿಸಿದ್ರು.