ಕೊಪ್ಪಳ: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಯಲಬುರ್ಗಾ ವಿಧಾನಸಭಾ ಕ್ಷೇತ್ರ ಒಂದು. ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಹೊಂದಿರುವ ಕ್ಷೇತ್ರವು ಯಲಬುರ್ಗಾ ತಾಲೂಕು ಹಾಗೂ ನೂತನ ಕುಕನೂರು ತಾಲೂಕನ್ನು ಒಳಗೊಂಡಿದೆ. ಸಾಮಾನ್ಯ ಕ್ಷೇತ್ರವಾಗಿರುವ ಇಲ್ಲಿ ಲಿಂಗಾಯತ ಸಮುದಾಯದವರೇ ಇಲ್ಲಿಯವರೆಗೆ ಶಾಸಕರಾಗಿ ಆಯ್ಕೆಯಾಗಿದ್ದು ವಿಶೇಷ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸವರಾಜ ರಾಯರಡ್ಡಿ ಮತ್ತು ಹಾಲಿ ಸಚಿವ ಹಾಲಪ್ಪ ಆಚಾರ್ ನಡುವೆ ನೇರ ಪೈಪೋಟಿ ಇದೆ.
ಯಲಬುರ್ಗಾ ಕ್ಷೇತ್ರದ ಚುನಾವಣಾ ಇತಿಹಾಸ:ಶೇ.90ರಷ್ಟು ಮಳೆಯಾಧಾರಿತ ಕೃಷಿ ಭೂಮಿ, ದೇವಾಲಯಗಳ ಚಕ್ರವರ್ತಿ ಎಂದು ಖ್ಯಾತಿ ಪಡೆದಿರುವ ಇಟಗಿಯ ಮಹಾದೇವ ದೇವಾಲಯ ಹಾಗೂ ಕುಕನೂರಿನಲ್ಲಿರುವ ಶಕ್ತಿ ದೇವತೆ ಮಹಾಮಾಯಾ ದೇವಾಲಯ, ಐತಿಹಾಸಿಕ ಕಲ್ಲೂರಿನ ಕಲ್ಲಿನಾಥೇಶ್ವರ ದೇಗುಲಗಳು ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿವೆ.
ಯಲಬುರ್ಗಾ ವಿಧಾನಸಭೆಗೆ 17 ಚುನಾವಣೆಗಳು ಜರುಗಿದ್ದು, 1957ರಲ್ಲಿ ಮೊದಲ ಬಾರಿಗೆ ಭರತೀಯ ರಾಷ್ಟ್ರೀಯ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಅಳವಂಡಿ ಶಂಕರಗೌಡ ಆಯ್ಕೆಯಾಗಿದ್ದರು. ನಂತರ 1962ರಲ್ಲಿ ಲೋಕಸೇವಾ ಸಂಘದಿಂದ ಸ್ಪರ್ಧಿಸಿದ್ದ ವೀರಭದ್ರಪ್ಪ ಶಾಸಕರಾಗಿದ್ದರು. 1967ರಲ್ಲಿ ಚೆನ್ನಬಸನಗೌಡ, 1972ರಲ್ಲಿ ಪ್ರಭುಲಿಂಗ ಲಿಂಗನಗೌಡ, 1978ರಲ್ಲಿ ಲಿಂಗರಾಜ, 1983 ರಲ್ಲಿ ಲಿಂಗರಾಜ ದೇಸಾಯಿ ಇವರೆಲ್ಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆದ್ದವರಾಗಿದ್ದಾರೆ.
ಐದು ಗೆದ್ದಿರುವ ರಾಯರಡ್ಡಿ:1985ರಲ್ಲಿ ಜೆಎನ್ಪಿಯಿಂದ ಸ್ಪರ್ಧಿಸಿ ಬಸವರಾಜ ರಾಯರಡ್ಡಿ ಆಯ್ಕೆಯಾಗಿದ್ದರು. ಅಲ್ಲಿಂದ 1989 ಮತ್ತು 1994ರಲ್ಲಿ ಜನತಾ ದಳದಿಂದ ಆಯ್ಕೆಯಾಗಿ ಬಸವರಾಜ ರಾಯರೆಡ್ಡಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು. 1996ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಶಿವಶರಣಗೌಡ ಪಾಟೀಲ ಆಯ್ಕೆಗೊಂಡಿದ್ದರು. ಇದಾದ ಬಳಿಕ 2004ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿ ರಾಯರಡ್ಡಿ ಜಯ ದಾಖಲಿಸಿದ್ದರು. 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಈಶಣ್ಣ ಗುಳಗಣ್ಣವರ ಆಯ್ಕೆಯಾಗಿದ್ದರು. 2013ರಲ್ಲಿ ಕಾಂಗ್ರೆಸ್ನಿಂದ ಬಸವರಾಜ ರಾಯರಡ್ಡಿ ಮತ್ತೊಮ್ಮೆ ಗೆಲುವು ಸಾಧಿಸಿದ್ದರು. ಕಳೆದ 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಹಾಲಪ್ಪ ಆಚಾರ್ ಮೊದಲ ವಿಧಾನಸಭೆಗೆ ಬಾರಿಗೆ ಆಯ್ಕೆಯಾದರು.
ರಾಯರಡ್ಡಿ ವರ್ಸಸ್ ಹಾಲಪ್ಪ: ಈ ಮೊದಲು ರಾಯರಡ್ಡಿ ಮತ್ತು ಹಾಲಪ್ಪ ಆಚಾರ್ ಇಬ್ಬರೂ ಕಾಂಗ್ರೆಸ್ ಪಕ್ಷದಲ್ಲಿದ್ದರು. ಆದರೆ, ಹಾಲಪ್ಪ ಆಚಾರ್ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದರು. ಬಳಿಕ ವಿಧಾನ ಪರಿಷತ್ ಆಯ್ಕೆಯಾಗಿದ್ದರು. ನಂತರ 2013ರ ಚುನಾವಣೆಯಲ್ಲಿ ಹಾಲಪ್ಪ ಆಚಾರ್ ಬಿಜೆಪಿಯಿಂದ ರಾಯರಡ್ಡಿ ವಿರುದ್ಧ ಸ್ಪರ್ಧೆ ಮಾಡಿದ್ದರು. ಆದರೆ, ಈ ಚುನಾವಣೆಯಲ್ಲಿ 16,900 ಮತಗಳಿಂದ ಹಾಲಪ್ಪ ಸೋಲು ಕಂಡಿದ್ದರು. ರಾಯರಡ್ಡಿ 52,388 ಮತ ಪಡೆದು ಗೆಲುವು ಸಾಧಿಸಿದರೆ, ಹಾಲಪ್ಪ 35,488 ಮತಗಳು ಗಳಿಸಿದ್ದರು. ಸಿದ್ದರಾಮಯ್ಯ ಸರ್ಕಾರದಲ್ಲಿ ರಾಯರಡ್ಡಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.