ಗಂಗಾವತಿ:ನಗರದ ಪುರಾತನ ಕೆರೆಯಾದ ರಾಮಲಿಂಗೇಶ್ವರ ಕೆರೆಯ ಒತ್ತುವರಿ ತೆರವು ಮಾಡಿ ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಿದ ಕರವೇ ಸಂಘಟಕರು ಉಪ ತಹಶೀಲ್ದಾರ್ ಮಂಜುನಾಥ ನಂದನವರ್ ಅವರಿಗೆ ಮನವಿ ಸಲ್ಲಿಸಿದರು.
ಈಗಾಗಲೇ ಕಂದಾಯ ಇಲಾಖೆಯಿಂದ ಹಲವರಿಗೆ ಅನಧಿಕೃತವಾಗಿ ಸಾಗುವಳಿ ಚೀಟಿ ನೀಡಲಾಗಿದೆ. ಕೂಡಲೇ ಕೆರೆ ಒತ್ತುವರಿಯನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು.
ಈ ಮೊದಲು ಗಂಗಾವತಿ ಸೇರಿದಂತೆ ಸುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರಿನ ಆಸರೆಯಾಗಿದ್ದ ರಾಮಲಿಂಗೇಶ್ವರ ಕೆರೆಯನ್ನು ಸಂಪೂರ್ಣವಾಗಿ ಒತ್ತುವರಿ ಮಾಡಲಾಗಿದೆ. ಪರಿಣಾಮ ನೀರಿನ ಸಂಗ್ರಹ ಕಡಿಮೆಯಾಗಿದೆ. ಈ ಕೆರೆಯಿಂದಾಗಿ ಅಂತರ್ಜಲ ವೃದ್ಧಿಯಾಗುತ್ತಿತ್ತು. ಆದರೆ ಈಗ ಕೆರೆಯನ್ನು ಒತ್ತುವರಿ ಮಾಡಲಾಗಿದೆ.
ಒತ್ತುವರಿಯನ್ನು ಕೂಡಲೇ ತೆರವು ಮಾಡಬೇಕು. ಈಗಾಗಲೇ ಈ ಕೆರೆಯ ಅಭಿವೃದ್ಧಿಗೆ 30 ಕೋಟಿ ರೂಪಾಯಿ ಮೊತ್ತದ ಅನುದಾನ ಮೀಸಲಿಡಲಾಗಿದೆ ಎಂಬ ಮಾಹಿತಿ ಇದ್ದು, ಅದನ್ನು ಸದ್ಬಳಕೆ ಮಾಡಬೇಕು ಎಂದು ಒತ್ತಾಯಿಸಿದರು.