ಗಂಗಾವತಿ (ಕೊಪ್ಪಳ):ಕಾರಟಗಿ - ಯಶವಂತರಪುರ ರೈಲು ಹಳಿ ತಪ್ಪಿದ ಘಟನೆ ಇಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಕಾರಟಗಿ ರೈಲ್ವೆ ನಿಲ್ದಾಣದ ಸಮೀಪ ನಡೆದಿದೆ. ಚಾಲಕನ ಸಮಯ ಪ್ರಜ್ಞೆಯಿಂದಾಗಿ ರೈಲಿನಲ್ಲಿದ್ದ ನೂರಾರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಾಂತ್ರಿಕ ಕಾರಣದಿಂದ ಎಂಜಿನ್ ಮುಂಭಾಗದಲ್ಲಿನ ಚಕ್ರ ಹಳಿ ತಪ್ಪಿದ್ದು ಗಮನಕ್ಕೆ ಬರುತ್ತಿದ್ದಂತೆಯೆ ತಕ್ಷಣ ಎಚ್ಚೆತ್ತುಕೊಂಡ ಲೋಕೋ ಪೈಲಟ್ ಕೂಡಲೇ ವೇಗವನ್ನು ಶೂನ್ಯಕ್ಕೆ ಇಳಿಸಿ ಅಪಾಯ ತಪ್ಪಿಸಿದ್ದಾರೆ. ಹೀಗಾಗಿ ರೈಲಿನ ಎಂಜಿನ್ ಮಾತ್ರ ಹಳಿ ತಪ್ಪಿದ್ದು, ಬೋಗಿಗಳು ಹಳಿಯ ಮೇಲೆ ನಿಂತಿವೆ. ರೈಲು ನಿಲ್ದಾಣ ಸಮೀಪಿಸಿದ್ದರಿಂದ ರೈಲಿನ ವೇಗವನ್ನು ಕಡಿಮೆ ಮಾಡಿದ್ದರಿಂದಾಗಿ ಲೋಕೋ ಪೈಲಟ್ ರೈಲನ್ನು ನಿಯಂತ್ರಿಸಲು ಸಾಧ್ಯವಾಗಿದೆ.
ಬೆಂಗಳೂರಿನ ಯಶವಂತಪುರದಿಂದ ಹೊರಟ ರೈಲು ಕಾರಟಗಿ ರೈಲು ನಿಲ್ದಾಣ ಸಮೀಪಿಸುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ರೈಲಿನಲ್ಲಿ ನೂರಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಆದರೆ ಅದೃಷ್ಟವಶಾತ್ ಯಾರಿಗೂ ಹಾನಿಯಾಗಿಲ್ಲ.
ಹಳಿ ತಪ್ಪಿದ ರೈಲನ್ನು ಮತ್ತೆ ಹಳಿಗೆ ತರಲು ಹೊಸಪೇಟೆಯಿಂದ ಕ್ರೇನ್ ತರಿಸಿದ್ದು, ಸುಮಾರು 4-5 ಗಂಟೆಗಳ ಕಾಲ ಕಾರ್ಯಾಚರಣೆ ನಡೆಯಲಿದೆ. ಸಂಜೆಯ ಕಾರಟಗಿ - ಬೆಂಗಳೂರು ಮಧ್ಯದ ಸಂಚಾರವನ್ನು ರದ್ದು ಪಡಿಸುವ ಸಾಧ್ಯತೆ ಇದೆ. ರೈಲು ಹಳಿ ತಪ್ಪಿದ್ದರಿಂದ ಮಧ್ಯಾಹ್ನ 2.15ಕ್ಕೆ ಕಾರಟಗಿಯಿಂದ ಹುಬ್ಬಳ್ಳಿ ಮಾರ್ಗದಲ್ಲಿ ಸಂಚರಿಸಬೇಕಿದ್ದ ರೈಲು ಪ್ರಯಾಣ ಸ್ಥಗಿತಗೊಳಿಸಲಾಗಿದೆ ಎಂದು ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಸಹಜವಾಗಿ ಪ್ರತಿ ಗಂಟೆಗೆ 90 ರಿಂದ 100 ಕಿಮೀ ವೇಗದಲ್ಲಿ ಸಂಚರಿಸುವ ಕಾರಟಗಿ - ಯಶವಂತರಪುರ ರೈಲು, ಕಾರಟಗಿಯ ನಿಲ್ದಾಣ ಸಮೀಪಿಸಿದ್ದರಿಂದ ರೈಲಿನ ವೇಗವನ್ನು ಗಂಟೆಗೆ 20ರಿಂದ 30 ಕಿ.ಮೀಗೆ ಇಳಿಸಲಾಗಿತ್ತು. ಹೀಗಾಗಿ ಹೆಚ್ಚಿನ ಅನಾಹುತ ತಪ್ಪಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.