ಕುಷ್ಟಗಿ (ಕೊಪ್ಪಳ):ಸೋತಂತಹ ವ್ಯಕ್ತಿಯನ್ನು ಮಂತ್ರಿ ಮಾಡಿರುವ ಸಿಎಂ ಯಡಿಯೂರಪ್ಪ ಅವರ ಬಗ್ಗೆ ಅಸಂಬದ್ಧ ಹೇಳಿಕೆ ನೀಡಿರುವುದು ಸರಿ ಅಲ್ಲ ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು, ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ನಡೆ ಕುರಿತು ಪ್ರತಿಕ್ರಿಯಿಸಿದ್ರು.
ದೇಶದ ಪ್ರಧಾನಿ ಆಗಿ ಮೋದಿ ಯಶಸ್ವಿ ಆಗಿ 7 ವರ್ಷ ಪೂರೈಸಿದ ಹಿನ್ನೆಲೆ, ಬಿಜೆಪಿ ನೇತೃತ್ವದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಅವರು ಮಾತನಾಡಿದ್ರು.
ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಜನರ ಜೀವ ಉಳಿಸಲು ತೊಡಗಿಸಿಕೊಳ್ಳಬೇಕಿರುವುದು ಜನತೆಯನ್ನು ಪ್ರತಿನಿಧಿಸುವವರು, ಜನಪ್ರತಿನಿಧಿಗಳ ಸಹಜ ಧರ್ಮ ಹಾಗೂ ಕರ್ತವ್ಯ ಕೂಡ ಆಗಿದೆ.
ಆಗ ಬೇಕಿತ್ತು ಈಗ ಬೇಡವೇ?
ಸಿ ಪಿ ಯೋಗೇಶ್ವರ್ ಅವರು, ಮೂರು ಪಕ್ಷದ ಸರ್ಕಾರ ಎಂದು ತಾವಿದ್ದ ಪಕ್ಷವನ್ನು ಮರೆತು ಮಾತನಾಡಿದ್ದಾರೆ ಎಂದ್ರು. ಸರ್ಕಾರ ರಚನೆಯ ವೇಳೆ ಓಡಾಡಿ ಕೆಲಸ ಮಾಡುವಾಗ ಅವರಿಗೆ ಯಡಿಯೂರಪ್ಪ ಬೇಕಾಗಿತ್ತು. ಈಗ ಬೇಡವಾಯಿತೇ? ಎಂದು ಕೇಳಿದ್ರು.
ಯಾರೋ ದೆಹಲಿಗೆ ಹೋಗಿ ನಾಯಕತ್ವದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ : ಕರಡಿ ಸಂಗಣ್ಣ ಯಾರೋ ದೆಹಲಿಗೆ ಹೋಗಿ ನಾಯಕತ್ವದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಎಂದ ಸಂಸದ ಸಂಗಣ್ಣ ಕರಡಿ, ಸಿ ಪಿ ಯೋಗೇಶ್ವರ್ ಚುನಾವಣೆಯಲ್ಲಿ ಸೋತರೂ ಎಂಎಲ್ಸಿ ಮಾಡಿ ಸಚಿವರನ್ನಾಗಿಯೂ ಮಾಡಿದ್ದಾರೆ.
ಅದಕ್ಕೆ ಯಡಿಯೂರಪ್ಪ ಅವರನ್ನು ಸ್ಮರಿಸಬೇಕು. ಯಡಿಯೂರಪ್ಪ ಬಗ್ಗೆ ಅಭಿಮಾನವಿಟ್ಟುಕೊಳ್ಳಬೇಕು. ಅದನ್ನು ಬಿಟ್ಟು ಮೂರು ಪಕ್ಷ, ಆರು ಪಕ್ಷ ಅಂತ ಮಾತನಾಡಿದರೆ ಹೇಗೆ? ಮಂತ್ರಿಯಾಗಬೇಕಾದರೆ ಗೊತ್ತಾಗಲಿಲ್ಲವಾ? ಎಂದು ಖಾರವಾಗಿ ಪ್ರಶ್ನಿಸಿದರು.
ನೋ ಚಾನ್ಸ್.. ನಾಯಕತ್ವ ಬದಲಾವಣೆ ಇಲ್ಲ
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ರು. ಇದು ಕೊರೊನಾ ಸಂಕಷ್ಟದ ಸಂದರ್ಭ. ಈ ವೇಳೆ ಜನರ ಜೀವ ಉಳಿಸುವ ಕೆಲಸ ಮಾಡಬೇಕು.
ಅದನ್ನು ಬಿಟ್ಟು ಈ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೂಗು ಎದ್ದಿರುವುದು ಅಸಂಬದ್ಧ.ಏನೇ ಆಂತರಿಕ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ, ಪಕ್ಷದ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಬೇಕು ಎಂದ್ರು.