ಕುಷ್ಟಗಿ (ಕೊಪ್ಪಳ):ಕುಷ್ಟಗಿ ಪಟ್ಟಣದ ಐತಿಹಾಸಿಕ ಕಲ್ಲಬಾವಿಗೆ ಕಾಯಕಲ್ಪ ನೀಡಲು ಪುರಸಭೆ ಮುಂದಾಗಿದ್ದು, ಮೊದಲ ಹಂತವಾಗಿ ಕಲ್ಲಬಾವಿಯಲ್ಲಿನ ನೀರನ್ನು ಹೊರ ಹಾಕುವ ಕಾರ್ಯಾಚರಣೆ ಶನಿವಾರದಿಂದ ಕೈಗೆತ್ತಿಕೊಳ್ಳಲಾಗಿದೆ.
ಬಿಜಾಪುರದ ಆದಿಲ್ಶಾಹಿ ನಿರ್ಮಿಸಿದ ಕಲ್ಲಬಾವಿಗೆ ಶತ ಶತಮಾನದ ಇತಿಹಾಸವಿದೆ. ಸಂಪೂರ್ಣ ಕಲ್ಲು, ಕಲ್ಲುಗಳ ಕಮಾನುಗಳಿಂದ ಸುಮಾರು 200 ಮೀಟರ್ ಉದ್ದ, ಅಗಲ ವಿನ್ಯಾಸದ ತೆರೆದ ಬಾವಿಯಾಗಿರುವುದರಿಂದ ಕಲ್ಲಬಾವಿ ಎನ್ನುವುದು ಜನಜನಿತವಾಗಿದೆ. ಇದರ ಪಕ್ಕದಲ್ಲಿ ಕೆರೆಯ (ಸದ್ಯ ಕ್ರೀಡಾಂಗಣ) ನೀರನ್ನು ಸುರಂಗ ಮಾರ್ಗವಾಗಿ ಕಲ್ಲಬಾವಿಗೆ ಹರಿಸಿ ಸಂಗ್ರಹಿಸಲಾಗುತ್ತಿದೆ. ನೀರು ಮರಳಿ ಹೋಗದಂತೆ ಸುರಂಗ ಮಾರ್ಗವನ್ನು ಗುಂಡು ಮೂಲಕ ಬಂದ್ ಮಾಡುವ ವ್ಯವಸ್ಥೆ ಇತ್ತು. ಕಾಲಕ್ರಮೇಣ ಕೆರೆಯ ಅಸ್ತಿತ್ವ ಇಲ್ಲದಾದಾಗ ಈ ಬಾವಿ ಪಾಳು ಬಿದ್ದಿದೆ.
ಕಲ್ಲಬಾವಿಗೆ ಪುರಸಭೆಯಿಂದ ಕಾರ್ಯಕಲ್ಪ ಕಳೆದ ದಶಕದ ಹಿಂದೆ ಸಂಘ ಸಂಸ್ಥೆಗಳ ಜೀರ್ಣೋದ್ಧಾರದಿಂದ ಒಂದು ಹಂತಕ್ಕೆ ತರಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ನಿರ್ಲಕ್ಷದಿಂದಾಗಿ ಪುನಃ ಪಾಳು ಬಿದ್ದಿದೆ. ಕಳೆದ ಅಕ್ಟೋಬರ್, ನವೆಂಬರ್ ತಿಂಗಳಿನ ಮಳೆಗೆ ಕೆರೆ ಭರ್ತಿಯಾಗಿದ್ದರಿಂದ ಪಾಳು ಬಿದ್ದ ಬಾವಿ ಬಸಿ ನೀರು, ಮಳೆ ನೀರಿನಿಂದ ಅರ್ಧ ಮಟ್ಟಕ್ಕೇರಿದೆ. ಕಸ, ಚರಂಡಿ ನೀರು, ಸೆಪ್ಟಿಕ್ ಪೈಪ್ಲೈನ್ ಮಲಿನ ಸೇರಿದ್ದರಿಂದ ನೀರು ಮತ್ತಷ್ಟು ಗಲೀಜು ಆಗಿದೆ. ಸೊಳ್ಳೆಗಳ ಹಾವಳಿ ವಿಪರೀತವಾಗಿದೆ.
ಕಲ್ಲಬಾವಿಯ ಪಶ್ಚಿಮ ದಿಕ್ಕಿನ ಗೋಡೆ ಕುಸಿದಿದ್ದು, ಕಾಲಕ್ರಮೇಣ ಮತ್ತಷ್ಟು ಅವನತಿ ಹೊಂದುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸಂಘ ಸಂಸ್ಥೆಯ ಯುವಕರು ಶಾಸಕ ಅಮರೇಗೌಡ ಬಯ್ಯಾಪೂರ, ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ, ಮುಖ್ಯಾಧಿಕಾರಿ ಅಶೋಕ ಪಾಟೀಲ ಅವರ ಮೇಲೆ ಒತ್ತಡ ತಂದಿದ್ದರು. ಈ ಹಿನ್ನೆಲೆಯಲ್ಲಿ ಪುರಸಭೆ ಶನಿವಾರದಿಂದ ಕಲ್ಲಬಾವಿಯಲ್ಲಿನ ಮಲಿನ ನೀರು ತೆರವು ಕಾರ್ಯ ಆರಂಭಿಸಿದೆ.
ಸದ್ಯ ನೀರೆತ್ತುವ ಪಂಪಸೆಟ್ ಮೋಟಾರ್ಗಳಿಂದ ನೀರು ಹೊರ ಹಾಕುವ ಕೆಲಸ ನಡೆದಿದೆ. ಭಾನುವಾರದಿಂದ ಇನ್ನೆರಡು ಮೋಟಾರ್ಗಳಿಂದ ನೀರೆತ್ತಿಸಿ, ಇದರಲ್ಲಿ ಹೂಳು ತೆಗೆದು ಸ್ವಚ್ಛ ಮಾಡಲಾಗುವುದು. ಫೆ.16ರಂದು ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲ್ಲಬಾವಿ ಸಂರಕ್ಷಣೆ ಕುರಿತಂತೆ ಜನಾಭಿಪ್ರಾಯದ ಹಿನ್ನೆಲೆಯಲ್ಲಿ ಸಮಾಲೋಚನಾ ಸಭೆ ಕರೆಯಲಾಗಿದೆ ಎಂದು ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ ತಿಳಿಸಿದರು. ಸಂಘ ಸಂಸ್ಥೆಯ ಬಸವರಾಜ್ ಗಾಣಗೇರ ಅವರು, ಈ ತೆರೆದ ಕಲ್ಲಬಾವಿ ಕೊಳಚೆ ಗುಂಡಿಯಾಗಿದ್ದು ರೋಗ ರುಜಿನಕ್ಕೆ ಕಾರಣವಾಗಿತ್ತು. ಬಾವಿ ಸ್ವಚ್ಛತೆ ಕಾರ್ಯ ಆರಂಭಿಸಿದ್ದಕ್ಕೆ ಪುರಸಭೆ ಅಧ್ಯಕ್ಷರಿಗೆ, ಮುಖ್ಯಾಧಿಕಾರಿಗಳಿಗೆ ಜನತೆ ಅಭಿನಂದನೆ ಸಲ್ಲಿಸಿದರು.