ಕೊಪ್ಪಳದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಭಾಷಣ ಕೊಪ್ಪಳ:ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾಶ್ಮೀರದ ಲಾಲ್ ಚೌಕ್ನಲ್ಲಿ ತಿರಂಗ ಹಾರಾಟವಾಗಿದೆ. ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಿಸುತ್ತಿದ್ದೇವೆ. ಈ ಮೂಲಕ ನಮ್ಮ ಸರ್ಕಾರ ನುಡಿದಂತೆ ನಡೆದಿದೆ ಎಂದು ಕೊಪ್ಪಳದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಹೇಳಿದರು.
ಈ ಹಿಂದೆ ಕಾರ್ಯಕರ್ತರ ಮನೆಯಿಂದ ನಮ್ಮ ಕಾರ್ಯಚಟುವಟಿಕೆಗಳು ನಡೆಯುತ್ತಿದ್ದವು. ಆದರೆ ಇಂದು ಪ್ರತಿ ಜಿಲ್ಲೆಯಲ್ಲಿ ಸ್ವಂತ ಕಟ್ಟಡ ಹೊಂದುವ ದಿನಗಳು ಒದಗಿಬಂದಿವೆ. ಮೋದಿ ಅಧಿಕಾರಕ್ಕೆ ಬಂದ ಕೂಡಲೇ ದೇಶದ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಕಾರ್ಯಾಲಯ ನಿರ್ಮಾಣ ಆಗಬೇಕು ಎಂದು ಯೋಜನೆ ರೂಪಿಸಲಾಗಿತ್ತು. ಅದರಂತೆ ಇಂದು ಎಲ್ಲವೂ ನಡೆಯುತ್ತಿವೆ ಎಂದರು.
ಜಗತ್ತಿನ ಪ್ರಬಲ ದೇಶಗಳು ಇಂದು ಜಿ 20ರ ನೇತೃತ್ವವನ್ನು ಭಾರತಕ್ಕೆ ನೀಡಿವೆ. ಒಂದು ವರ್ಷಗಳ ಕಾಲ ನರೇಂದ್ರ ಮೋದಿ ಅದರ ಅಧ್ಯಕ್ಷರಾಗಿರಲಿದ್ದಾರೆ. ಕರ್ನಾಟಕದ ಬೆಂಗಳೂರಿನಲ್ಲಿ ಜಿ20 ಸಭೆಗಳು ನಡೆಯಲಿವೆ. ಆ ಮೂಲಕ ಕರ್ನಾಟಕವು ಹಲವು ದೇಶಗಳಿಗೆ ಅತಿಥಿ ಸತ್ಕಾರ ನೀಡಲಿದೆ ಎಂದು ಹೇಳಿದರು.
ದೇಶದಲ್ಲಿ ಇಂದು ವಂದೇ ಭಾರತ್ ರೈಲು ಸಂಚಾರ ನಡೆಸುತ್ತಿದೆ. ಇನ್ನೂ ಅನೇಕ ಭಾಗಗಳಲ್ಲಿ ಈ ರೈಲು ಸಂಚರಿಸಲಿವೆ. ಕಾಶಿ ಯಾತ್ರೆಗೆ ರೈಲು ಬಿಡಲಾಗಿದೆ. ವಿಮಾನ ನಿಲ್ದಾಣಗಳ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಕೆಂಪೇಗೌಡರ ಬಹುದೊಡ್ಡ ಪ್ರತಿಮೆ ನಿರ್ಮಿಸಿ ಅನಾವರಣ ಮಾಡಿದ್ದೇವೆ. ನವ ಮಂಗಳೂರು ಬಂದರನ್ನು ಉನ್ನತೀಕರಿಸಲಾಗಿದೆ. ಮಂಗಳೂರು ರಿಫೈನರೀಸ್ಗೆ 1,300 ಕೋಟಿ ರೂ ನೀಡಲಾಗಿದೆ. ಆ ಮೂಲಕ ಪ್ರತಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಗ್ರಾಮ ಸಡಕ್ ಯೋಜನೆಯಡಿ ಹಳ್ಳಿಗಳ ಉದ್ಧಾರ ಮಾಡಲಾಗುತ್ತಿದೆ ಎಂದು ನಡ್ಡಾ ಸರ್ಕಾರದ ಸಾಧನೆಗಳನ್ನು ವಿವರಿಸುತ್ತಾ ಹೋದರು.
ಇದನ್ನೂ ಓದಿ:ಅಭಿವೃದ್ಧಿಯ ಆಧಾರದ ಮೇಲೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ: ಸಿಎಂ ಬೊಮ್ಮಾಯಿ ವಿಶ್ವಾಸ
ದೇಶದಲ್ಲಿ ಸ್ವಚ್ಚತೆ ಕಾಪಾಡಲು 12 ಕೋಟಿ ಕುಟುಂಬಗಳಿಗೆ ಶೌಚಾಲಯ ನಿರ್ಮಿಸಲಾಗಿದೆ. ಮಹಿಳೆಯರ ಗೌರವ ಕಾಪಾಡಲು ಮೋದಿ ಸರ್ಕಾರ ಮುಂದಾಗಿದೆ. ಆಯುಷ್ಮಾನ್ ಭಾರತ ಯೋಜನೆಯಡಿ ಎಲ್ಲರ ಆರೋಗ್ಯ ಕಾಪಾಡುವ ಕೆಲಸ ನಡೆಯುತ್ತಿದೆ. ಜಲ ಜೀವನ ಯೋಜನೆಯಡಿ ಪ್ರತಿ ಮನೆಗೂ ನೀರು ನೀಡಲಾಗುತ್ತಿದೆ. ಅದರಂತೆ ಉಜ್ವಲ ಯೋಜನೆಯಡಿ ದೇಶದಲ್ಲಿ 9 ಕೋಟಿ ಕುಟುಂಬಗಳಿಗೆ ಸಿಲಿಂಡರ್ ನೀಡಲಾಗಿದೆ.
ಶಾಲಾ ಮಕ್ಕಳಿಗೆ ಶಿಷ್ಯವೇತನ:ರೈತರ ಮಕ್ಕಳಿಗೆ, ಕಾರ್ಮಿಕರ ಮಕ್ಕಳಿಗೆ, ಮೀನುಗಾರರ ಮಕ್ಕಳಿಗೆ ರಾಜ್ಯ ಸರ್ಕಾರ ಶಿಷ್ಯವೇತನ ನೀಡುತ್ತಿದೆ. ಆ ಮೂಲಕ ಸಮಾಜದ ಪ್ರತಿ ವರ್ಗಕ್ಕೂ ಸರ್ಕಾರ ಯೋಜನೆಗಳನ್ನು ನೀಡುತ್ತಿದೆ ಎಂದು ರಾಜ್ಯ ಸರ್ಕಾರವನ್ನು ಶ್ಲಾಘಿಸಿದರು. ನಮ್ಮ ಕಾರ್ಯಕರ್ತರು ರಾಜ್ಯದ ಜನರ ಶ್ರೇಯೋಭಿವೃದ್ಧಿಗಾಗಿ ಹಗಲು ರಾತ್ರಿ ಸೇವಾ ಭಾವನೆಯಿಂದ ಕೆಲಸ ಮಾಡಬೇಕಿದೆ. ಆ ಮೂಲಕ ಪ್ರತಿ ಮನೆ, ಪ್ರತಿ ವ್ಯಕ್ತಿಯನ್ನೂ ತಲುಪಬೇಕು ಎಂದು ಕರೆ ಕೊಟ್ಟರು.
ಕಾಂಗ್ರೆಸ್ನದು ಭಾರತ್ ತೋಡೋ ಕಾರ್ಯ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡುತ್ತಿರುವುದು ಭಾರತ್ ಜೋಡೋ ಯಾತ್ರೆ ಅಲ್ಲ, ಭಾರತ್ ತೋಡೋ ಯಾತ್ರೆ. ಕಾಶ್ಮೀರಕ್ಕೆ 370ನೇ ವಿಧಿ ತೆಗೆದು ಹಾಕಿದ್ದು ಮೋದಿ ಸರ್ಕಾರ. ನಿಮ್ಮ ಪರಿವಾರದವರೇ ಕಾಶ್ಮೀರವನ್ನು ಬೇರೆ ಇಟ್ಟಿದ್ದರು. ಇದು ಜೋಡೋ ಎಂದು ಹೇಗೆ ಕರೆಯುತ್ತೀರಿ?. ದೆಹಲಿಯ ಜೆಎನ್ಯು ವಿವಿಯಲ್ಲಿ ಭಯೋತ್ಪಾದಕರ ಪರ ಘೋಷಣೆ ಹಾಕಲಾಯಿತು. ಭಾರತ್ ತುಕ್ಡೆ ತುಕ್ಡೆ ಎಂದು ಹೇಳಿದರು. ಇದು ನಿಮ್ಮ ನೀತಿ. ಕಾಂಗ್ರೆಸ್ ನಿಂದ ಜೋಡೋ ನಡೆಯುತ್ತಿಲ್ಲ ಬದಲಾಗಿ ತೋಡೋ ನಡೆಯುತ್ತಿದೆ ಎಂದು ಹೇಳಿದರು.