ಗಂಗಾವತಿ (ಕೊಪ್ಪಳ): ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಎಚ್ಆರ್ಜಿ ಕ್ಯಾಂಪಿನ ಜನವಸತಿ ಪ್ರದೇಶದ ಅನತಿ ದೂರದ ಬೆಟ್ಟದಲ್ಲಿ ಪತ್ತೆಯಾಗಿರುವ ಆದಿಮಾನವರು ವಾಸವಿದ್ದ ಪ್ರದೇಶಕ್ಕೆ ಇಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ರತ್ನಂಪಾಂಡೆ ಭೇಟಿ ನೀಡಿದರು.
ಇಲ್ಲಿರುವ ಆದಿ ಮಾನವರ ನೆಲೆ ಮತ್ತು ವಾಸ ಸ್ಥಾನದ ಸ್ಮಾರಕಗಳು ನಾಶವಾಗುತ್ತಿರುವ ಬಗ್ಗೆ ಸಿಇಒ ಮಾಹಿತಿ ಪಡೆದುಕೊಂಡರು. ಸ್ಥಳೀಯ ಯುವಕರ ನೆರವಿನಿಂದ ಅತ್ಯಂತ ಕಡಿದಾದ ಮತ್ತು ದುರ್ಗಮ ದಾರಿಯಲ್ಲಿ ಬೆಟ್ಟಕ್ಕೆ ಭೇಟಿ ನೀಡಿದ ಸಿಇಒ, ಬೆಟ್ಟದ ತಳಹದಿಯಲ್ಲಿ ಹರಡಿಕೊಂಡಿರುವ ಮೋರೇರ್ ಮನೆ ಎಂದು ಕರೆಯಲಾಗುವ ಸ್ಮಾರಕಗಳನ್ನು ವೀಕ್ಷಿಸಿದರು.
ಈ ಬಗ್ಗೆ ಮಾತನಾಡಿದ ಯುವಕ ಹೊಳೆಯಪ್ಪ, ಸುಮಾರು ಐದು ಸಾವಿರ ವರ್ಷಗಳಷ್ಟು ಪುರಾತನವಾಗಿರುವ ಈ ಸ್ಮಾರಕಗಳನ್ನು ದುಷ್ಕರ್ಮಿಗಳು ನಿಧಿ ಆಸೆಗಾಗಿ ನಾಶ ಮಾಡಿದ್ದಾರೆ. ಕಡಿದಾದ ಪ್ರದೇಶವಾಗಿರುವುದರಿಂದ ಸ್ಮಾರಕ ರಕ್ಷಣೆ ಸಾಧ್ಯವಾಗಿಲ್ಲ. ಬೆಟ್ಟದ ಮೇಲೇರಲು ಸರಿಯಾದ ರಸ್ತೆ ಸೌಕರ್ಯ ಇಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ರಸ್ತೆ ನಿರ್ಮಾಣ ಮಾಡಬೇಕು. ಪ್ರಾಚ್ಯವಸ್ತು ಇಲಾಖೆ ಸ್ಮಾರಕಗಳನ್ನು ರಕ್ಷಣೆ ಮಾಡಬೇಕು ಎಂದು ಹೇಳಿದರು.