ಕುಷ್ಟಗಿ :ಮಾರಕ ಕೊರೊನಾ ವೈರಸ್‌ಗೆ ಅಕ್ಷರಶಃ ಹೆದರಿರುವ ಜಾರ್ಖಂಡ್ ಮೂಲದ ಕಾರ್ಮಿಕರು, ಹೇಗಾದರೂ ತಮ್ಮೂರು ಸೇರಬೇಕೆಂದು ಸೇವಾಸಿಂಧು ಪೋರ್ಟಲ್ ಮೊರೆ ಹೋಗಿದ್ದು, ಅನುಮತಿ ಸಿಗದೇ ಕಂಗಾಲಾಗಿದ್ದಾರೆ.
ತಾಲೂಕಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ನಿರ್ವಹಿಸಲು ಎಲ್&ಟಿ ಕಂಪನಿಯ ಪರವಾಗಿ ಇಲ್ಲಿಗೆ ಆಗಮಿಸಿ ನಾಲ್ಕೈದು ತಿಂಗಳಾಗಿವೆ. ಗೋರೆಬಾಳ, ತಾವರಗೇರಾ, ಕುರಬನಾಳ, ಹನುಮಸಾಗರ, ಉಪ್ಪಲದಿನ್ನಿ, ಕುಷ್ಟಗಿಯಲ್ಲಿ 400ಕ್ಕೂ ಅಧಿಕ ಕಾರ್ಮಿಕರಿಗೆ ಕಂಪನಿಯೇ ತಾತ್ಕಾಲಿಕ ವಸತಿ ಕಲ್ಪಿಸಿದೆ. ಆದರೆ, ಇವರ ಕುಟುಂಬದವರು, ಕೊರೊನಾ ಭೀತಿಗೆ ಕೆಲಸಬಿಟ್ಟು ಬರುವಂತೆ ದುಂಬಾಲು ಬಿದ್ದಿದ್ದು, ಇವರಲ್ಲಿ 50ಕ್ಕೂ ಅಧಿಕ ಜನರು, ಜಾರ್ಖಂಡ್‍ಗೆ ಹೋಗಲು ಸೇವಾಸಿಂಧು ಫೋರ್ಟಲ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಇನ್ನೂ ಅರ್ಜಿ ಸಲ್ಲಿಸುವವರಿದ್ದು, ಹೀಗೆ ದಿನ ಕೆಲಸಬಿಟ್ಟು ತಹಶೀಲ್ದಾರ್ ಕಚೇರಿಗೆ ಅಲೆದಾಡುವುದಕ್ಕೆ ಎಲ್&ಟಿ ಕಂಪನಿ ಅಧಿಕಾರಿಗಳು ಗರಂ ಆಗಿದ್ದಾರೆ. ಈ ರೀತಿ ಕೆಲಸಬಿಟ್ಟು ಹೋಗುತ್ತಿರುವ ಬಗ್ಗೆ ಕಂಪನಿಯವರು ತಾತ್ಕಾಲಿಕ ವಸತಿಯಲ್ಲಿ ಊಟ, ನೀರು, ಸೇವೆ ನಿಲ್ಲಿಸಿದ್ದಾರೆ. ಜಾರ್ಖಾಂಡ್‌ಗೆ ಹೋಗಲು ಒತ್ತಾಯಿಸಿದರೆ ತಾತ್ಕಾಲಿಕ ವಸತಿಯಿಂದ ಓಡಿಸುವುದಾಗಿ ಕಂಪನಿಯವರು ಹೆದರಿಸಿದ್ದು, ಈ ಜನರಿಗೆ ಕೊರೊನಾ ಭಯಕ್ಕಿಂತ ಕಂಪನಿವರು ಭಯ ಬೆಚ್ಚಿ ಬೀಳಿಸಿದೆ.
ತಾತ್ಕಾಲಿಕ ವಸತಿಯಲ್ಲಿ ಕರೆಂಟು ಇಲ್ಲದ ಪರಿಸ್ಥಿತಿಯಲ್ಲಿ ವಿಷ ಜಂತುಗಳಿಗೆ ಹೆದರಿ ಮಲಗುವಂತಾಗಿದೆ. ಕೆಲಸ ನಿರ್ವಹಿಸದ ಹಿನ್ನೆಲೆಯಲ್ಲಿ ಒಂದು ಹೊತ್ತಿನ ಊಟ ಮಾತ್ರ ಸಿಗುತ್ತಿದೆ ಎಂದು ಕಾರ್ಮಿಕ ಮುಖಂಡ ಧನಂಜಯ ಪ್ರಸಾದ ಗುಪ್ತ ಅವರು, ಈಟಿವಿ ಭಾರತ ಪ್ರತಿನಿಧಿಗೆ ತಿಳಿಸಿದರು. ಈ ಕುರಿತು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಪ್ರತಿಕ್ರಿಯಿಸಿ, ಜಾರ್ಖಾಂಡ್ ಕಾರ್ಮಿಕರು, ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿದವರ ಪಟ್ಟಿ ನೀಡಿದರೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಅವರನ್ನು ತಮ್ಮ ರಾಜ್ಯಕ್ಕೆ ಕಳಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.