ಕುಷ್ಟಗಿ :ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಮಲ್ಟಿ ಆರ್ಚ್ ಚೆಕ್ ಡ್ಯಾಂ (ಬಹು ಕಮಾನು ತಡೆಗೋಡೆ) ನಿರ್ಮಾಣ ಯೋಜನೆಯಲ್ಲಿ ಕೋಟ್ಯಂತರ ರೂ. ದುರ್ಬಳಕೆ ಮಾಡಿದ ಹಿನ್ನೆಲೆ ಪಂಚಾಯತ್ ರಾಜ್ ಎಂಜಿನಿಯರ್ ಎಂ. ಇಲಿಯಾಸ್ ಅವರನ್ನು ಕೊಪ್ಪಳ ಸೈಬರ್ ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮಲ್ಟಿ ಆರ್ಚ್ ಚೆಕ್ ಡ್ಯಾಂ ನಿರ್ಮಾಣ ಹಗರಣದಲ್ಲಿ 2.98 ಕೋಟಿ ರೂ. ದುರ್ಬಳಕೆ ಮಾಡಿರುವುದು ತನಿಖೆಯಲ್ಲಿ ಸಾಬೀತಾದ ಹಿನ್ನೆಲೆ, ಕೊಪ್ಪಳ ಸೈಬರ್ ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಕಿರಿಯ ಎಂಜಿನಿಯರ್ ಎಂ. ಇಲಿಯಾಸ್ ಸೇರಿ ಸಹಾಯಕ ಎಂಜಿನಿಯರ್ ಅಜಿತ್ ದಳವಾಯಿ, ಕಿರಿಯ ಎಂಜಿನಿಯರ್ ಕವಿತಾ, ರಿಜ್ವಾನ್, ಆಶ್ವಿನಿ, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಶಂಕರ್ ಮಾಳಗಿ, ಎಸ್ ಡಿ ನಾಗೋಡ್ ವಿರುದ್ಧ ಸಿಇಒ ರಘುನಂದಮೂರ್ತಿ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿತ್ತು.
ಓದಿ: ಬೈಕ್ ಸವಾರನಿಂದ 4 ಲಕ್ಷ ರೂ. ದೋಚಿದ ಖದೀಮರ ತಂಡ..!
ಈ ಪ್ರಕರಣ ದಾಖಲಾಗುತ್ತಿದ್ದಂತೆ ಎಲ್ಲಾ ಆರೋಪಿಗಳು ನಾಪತ್ತೆಯಾಗಿದ್ದರು. ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದವು. ಸೋಮವಾರ ಇಲ್ಲಿನ ಜಿಪಂ ಎಂಜಿನಿಯರಿಂಗ್ ಉಪ ವಿಭಾಗದ ಕಾರ್ಯಾಲಯಕ್ಕೆ ಆರೋಪಿ ಜೆಇ ಎಂ ಇಲಿಯಾಸ ಆಗಮಿಸಿದ್ದರು.
ಇವರ ಇರುವಿಕೆ ಖಚಿತ ಮಾಹಿತಿ ಮೇರೆಗೆ ಕೊಪ್ಪಳ ಸೈಬರ್ ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆ ಸಿಪಿಐ ಚಂದ್ರಶೇಖರ್ ಹರಿಹರ ಅವರು ಎಂಜಿನಿಯರ್ನನ್ನು ಬಂಧಿಸಿದ್ದಾರೆ. ಇದೇ ವೇಳೆ ಸದರಿ ಕಚೇರಿಯಲ್ಲಿ ಹೆಚ್ಚಿನ ತನಿಖೆಗಾಗಿ ದಾಖಲೆಗಳನ್ನು ಪರಿಶೀಲಿಸಲಾಯಿತು.
ಏನಿದು ಪ್ರಕರಣ?:2019-20ನೇ ಸಾಲಿನಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ 21 ಮಲ್ಟಿ ಆರ್ಚ್ ಚೆಕ್ ಡ್ಯಾಂ ನಿರ್ಮಾಣದಲ್ಲಿ 44.71 ಲಕ್ಷ ರೂ. ವ್ಯಯಿಸಲಾಗಿದೆ. ಸರ್ಕಾರದಿಂದ ತನಿಖೆಯಾದಾಗ 16.77 ಲಕ್ಷ ರೂ. ಕಾಮಗಾರಿಯಾಗಿದೆ. ಉಳಿದ 27.94 ಲಕ್ಷ ರೂ. ದುರುಪಯೋಗವಾಗಿದೆ.
ದಾಖಲಾದ ಎರಡು ಎಫ್‌ಐಆರ್ ಪ್ರಕರಣದಲ್ಲಿ ಎಂ ಇಲಿಯಾಸ್ 11.93 ಲಕ್ಷ ರೂ. ಹಾಗೂ139.48 ಲಕ್ಷಗಳ ದುರುಪಯೋಗ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದಾರೆ. ಕುಷ್ಟಗಿ ಉಪ ವಿಭಾಗದಲ್ಲಿ ಇದೇ ಯೋಜನೆಯಲ್ಲಿ 198 ಕಾಮಗಾರಿಗಳು ದುರಪಯೋಗವಾಗಿ 2.70 ಕೋಟಿ ರೂ. ದುರ್ಬಳಕೆಯಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.