ಗಂಗಾವತಿ(ಕೊಪ್ಪಳ): ಮಾಜಿ ಸಚಿವ ಗಣಿ ಉದ್ಯಮಿ ಜನಾರ್ದನ ರೆಡ್ಡಿ ಅವರ ಟೆಂಪಲ್ ರನ್ ಮುಂದುವರೆದಿದೆ. ಗುರುವಾರ ನಗರದ ಗ್ರಾಮ ದೇವತೆ ದುರ್ಗಾದೇವಿ ದೇವಸ್ಥಾನ ಮತ್ತು ನಗರದ ಆರಾಧ್ಯ ದೈವ ಚನ್ನಬಸವ ಸ್ವಾಮಿ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಮೊದಲಿಗೆ ಚನ್ನಬಸವ ಸ್ವಾಮಿ ಮಠಕ್ಕೆ ಭೇಟಿ ನೀಡಿದ ಅವರು ವಿಶೇಷ ಪೂಜೆ ಸಲ್ಲಿಸಿ, ಚನ್ನಬಸವ ತಾತನ ಗದ್ದುಗೆ ದರ್ಶನ ಪಡೆದರು. ಈ ವೇಳೆ ಮಠದ ವತಿಯಿಂದ ಹಿರಿಯ ಮುಖಂಡ ಹೊಸಹಳ್ಳಿ ಶಂಕರಗೌಡ ರೆಡ್ಡಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಅಲ್ಲಿಂದ ತೆರಳಿದ ರೆಡ್ಡಿ ದುರ್ಗಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಈ ವೇಳೆ, ಮಹಿಳೆಯರು ಅವರಿಗೆ ಆರತಿ ಎತ್ತಿ ಸ್ವಾಗತಿಸಿದರು. ದೇಗುಲದ ಸಮಿತಿ ಅಧ್ಯಕ್ಷ ನಾರಾಯಣಪ್ಪ ಹೂವಿನ ಹಾರ ಹಾಕಿ ರೆಡ್ಡಿ ಅವರನ್ನು ಗೌರವಿಸಿದರು.