ಗಂಗಾವತಿ(ಕೊಪ್ಪಳ): ದೇಶದಲ್ಲಿಯೇ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಏನು ಅನ್ನೋದನ್ನು ತೋರಿಸುತ್ತೇನೆ. ನಾನು ಯಾವುದೇ ಪಕ್ಷದ ಬಿ ಟೀಂ ಅಲ್ಲ. ನಾನು ಬಸವಣ್ಣನ ತತ್ವ, ಆದರ್ಶದ ಮೇಲೆ ನಡೆಯುವವನು. ಒಮ್ಮೆ ಮುಂದಿಟ್ಟ ಹೆಜ್ಜೆಯನ್ನು ಹಿಂದಿಡುವವನಲ್ಲ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದರು. ಗಂಗಾವತಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷ ಘೋಷಣೆ ನಂತರ ಮೊದಲ ಬಾರಿಗೆ ಕ್ಷೇತ್ರಕ್ಕೆ ಬಂದಿದ್ದೇನೆ. ನಿನ್ನೆಯೇ ಕ್ಷೇತ್ರಕ್ಕೆ ಬರಬೇಕಿತ್ತು, ಆದರೆ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ತೆರಳಿದ್ದರಿಂದ ಬರಲಾಗಲಿಲ್ಲ. ಗಂಗಾವತಿಯ ಜನ ಬಹಳ ಪ್ರೀತಿ ವಿಶ್ವಾಸದಿಂದ ನಮ್ಮ ಪಕ್ಷವನ್ನು ಸ್ವೀಕರಿಸಿದ್ದಾರೆ ಎಂದರು.
ಜನರು ನಾಳೆಯೇ ಏಲೆಕ್ಷನ್ ಇದೆ, ವೋಟ್ ಮಾಡಬೇಕು ಅನ್ನೋ ಧಾವಂತದಲ್ಲಿದ್ದಾರೆ. ನನ್ನ ಹೊಸ ಪಕ್ಷದ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಏನೇ ಮಾತನಾಡಲಿ. ಕೆಆರ್ಪಿಪಿ ಪಕ್ಷ ದೇಶ, ರಾಜ್ಯದಲ್ಲಿ ಏನು ಅನ್ನೋದನ್ನು ಮುಂದೆ ತೋರಿಸಿಕೊಡುತ್ತೇನೆ. ಅವರು ಏನಾದ್ರು ಹೇಳಲಿ, ನಾನು ತಲೆಕೆಡಿಸಿಕೊಳ್ಳಲ್ಲ ಎಂದು ಕಾಂಗ್ರೆಸ್, ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟರು. ನಾನು ಯಾವುದೇ ಪಕ್ಷದ ನಾಯಕರನ್ನು ಟಾರ್ಗೆಟ್ ಮಾಡಿಲ್ಲ. ಅವರಾಗಿಯೇ ನಮ್ಮ ಪಕ್ಷಕ್ಕೆ ಬಂದರೆ ಪ್ರೀತಿ ವಿಶ್ವಾಸದಿಂದ ಕರೆದುಕೊಳ್ಳುತ್ತೇವೆ. ಜ.16ರ ಬಳಿಕ ಪಕ್ಷದ ಪ್ರಣಾಳಿಕೆ ಹಾಗೂ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡುತ್ತೇವೆ ಎಂದು ಹೇಳಿದರು.
ನಾನು ರಾಜಕೀಯಕ್ಕೆ ಬರಬೇಕೆಂದು ಉದ್ದೇಶ ಇರಿಸಿಕೊಂಡು ಬಂದವನಲ್ಲ:ನಂತರ ಮಾತನಾಡಿದ ಅವರು, ಯಾವತ್ತೂ ನಾನು ರಾಜಕೀಯಕ್ಕೆ ಬರಬೇಕೆಂದು ಉದ್ದೇಶ ಇರಿಸಿಕೊಂಡು ಬಂದವನಲ್ಲ. ನನ್ನ ವಿಚಾರದಲ್ಲಿ ನಾನು ಬಯಸಿದ್ದು ಒಂದು, ಆದರೆ, ವಿಧಿ ಬಗೆದಿದ್ದು ಮತ್ತೊಂದು ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಬೇಸರ ವ್ಯಕ್ತಪಡಿಸಿದರು. ನಗರದ ಉದ್ಯಮಿ ಕೃಷ್ಣ ದಲಬಂಜನ ನಿವಾಸದಲ್ಲಿ ಕ್ಷತ್ರೀಯ ಸಮಾಜದಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ನಾನು ಬಾಲ್ಯದಲ್ಲಿ ವ್ಯಾಪಾರ ವಹಿವಾಟು ನಡೆಸುವ ಮೂಲಕ ದೊಡ್ಡ ಉದ್ಯಮಿಯಾಗಿ ದೇಶ ವಿದೇಶದಲ್ಲಿ ಖ್ಯಾತಿ ಗಳಿಸಬೇಕೆಂದು ಗುರಿ ಇರಿಸಿಕೊಂಡವನು. ಆದರೆ ಹಿರಿಯರು ಹೇಳಿದಂತೆ ನಾವು ಬಯಸುವುದು ಒಂದು, ಭಗವಂತ ನಿಶ್ಚಯ ಮಾಡುವುದು ಇನ್ನೊಂದು ಎಂಬುದು ನನ್ನ ವಿಚಾರದಲ್ಲಿ ಸಾಬೀತಾಗಿದೆ ಎಂದರು.
ಬಳ್ಳಾರಿಯ ವಾತಾವರಣ ನನಗೆ ಗಂಗಾವತಿಯಲ್ಲಿ ಸಿಕ್ಕಿದೆ:ನಾನು ಬಳ್ಳಾರಿಯಲ್ಲಿದ್ದರೆ ಇಡೀ ಉತ್ತರ ಕರ್ನಾಟಕದಲ್ಲಿ ಏನೋ ಮಾಡಿ ಬಿಡ್ತೇನೆ ಎಂದು ಭಯಭೀತರಾದವರು ನನ್ನನ್ನು ಬಳ್ಳಾರಿಯಿಂದ ಹೊರಹಾಕಿಲು ನೋಡ್ತಾ ಇದ್ದಾರೆ. ಬಳ್ಳಾರಿಯಿಂದ ಹೊರ ಹಾಕಿದರೆ ಬೆಂಗಳೂರಿಗೆ ಹೋಗಿ ಕೂರುತ್ತೇನೆ ಎಂದು ಬಹಳ ಜನ ಭಾವಿಸಿದ್ದಾರೆ. ನಾನು ಬಳ್ಳಾರಿಯಿಂದ ಬೆಂಗಳೂರಿಗೆ ಹೋಗಬಾರದು ಮತ್ತು ಗಂಗಾವತಿಗೆ ಹೋಗಬೇಕೆಂದು ನಿರ್ಧಾರ ತಳೆದಿದ್ದೆ. ನಾನು ಗದಗ, ಕೋಲಾರ, ರಾಯಚೂರು ಹೋಗಬಹುದಿತ್ತು. ಬೆಂಗಳೂರಿನ ಐದಾರು ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಗೆಲುವು ಸುಲಭವಾಗಿತ್ತು ಎಂಬ ವಿಚಾರ ನನಗೂ ಗೊತ್ತಿತ್ತು. ಜನರಿಗೂ ಗೊತ್ತು. ಆದರೆ ಬಳ್ಳಾರಿಯ ವಾತಾವರಣ ನನಗೆ ಗಂಗಾವತಿಯಲ್ಲಿ ಸಿಕ್ಕಿದೆ ಎಂದು ಮಾಜಿ ಸಚಿವರು ಹೇಳಿದರು.