ಗಂಗಾವತಿ(ಕೊಪ್ಪಳ): "ನಿಮ್ಮ ಮಕ್ಕಳು ಯುಕೆಜಿಯಿಂದ ಪಿಜಿವರೆಗೂ ಓದುತ್ತಾರಾ? ಹಾಗಾದರೆ ಆ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ನಾನು ವೈಯಕ್ತಿಕವಾಗಿ ಆ ಮಕ್ಕಳ ಪಾಲಕರ ಅಕೌಂಟಿಗೆ ಹಾಕುತ್ತೇನೆ. ನಿವೇಶನ ಇದ್ದವರಿಗೆ ಮನೆ ಕಟ್ಟಿಸಿ ಕೊಡುವೆ. ಸೈಟ್ ಇಲ್ಲದವರಿಗೆ ಜಾಗ ಖರೀದಿ ಮಾಡಿ ಅವರಿಗೂ ಮನೆ ಕಟ್ಟಿಸಿಕೊಡುವೆ. ನಾನಾ ಸಮುದಾಯಗಳ ಪ್ರಮುಖರು ಬಯಸಿದ್ದಲ್ಲಿ ಅವರು ಸೂಚಿಸುವ ಸ್ಥಳದಲ್ಲಿಯೇ 100*50 ಸೈಜ್ನಲ್ಲಿ ತಾಂತ್ರಿಕವಾಗಿ ಪರಿಶೀಲಿಸಿ ಸಕಲ ಸೌಲಭ್ಯಗಳಿರುವ ಹೈಟೆಕ್ ಸಮುದಾಯ ಭವನ, ಕಲ್ಯಾಣ ಮಂಟಪ ನಿರ್ಮಾಣ ಮಾಡಿ ಕೊಡಲು ಸಿದ್ಧನಿದ್ದೇನೆ" ಎಂಬ ಭರವಸೆಗಳನ್ನು ಕೆಆರ್ಪಿಪಿ ಪಕ್ಷದ ಸ್ಥಾಪಕ, ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ನೀಡಿದ್ದಾರೆ.
ನಗರದ ಹಿರೇಜಂತಜಕಲ್, ಚಲುವಾದಿ ಓಣಿ, ತಾಲೂಕಿಮ ಬೆಣಕಲ್ ಗ್ರಾಮಗಳಲ್ಲಿ ಚುನಾವಣೆ ಪ್ರಚಾರ ಕಾರ್ಯ ನಡೆಸುತ್ತಿರುವ ಪಕ್ಷದ ಕಾರ್ಯಕ್ರಮದಲ್ಲಿ ಸೇರಿದ ಜನರನ್ನು ಉದ್ದೇಶಿಸಿ ಗಂಗಾವತಿ ವಿಧಾನಸಭಾ ಕ್ಷೇತ್ರದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯೂ ಆಗಿರುವ ಜನಾರ್ದನರೆಡ್ಡಿ, ಭರಪೂರ ಭರವಸೆಗಳನ್ನು ನೀಡುವ ಮೂಲಕ ಜನರನ್ನು ಸೆಳೆಯುವ ಯತ್ನ ಮಾಡುತ್ತಿದ್ದಾರೆ.
ಚಲುವಾದಿ ಅಸ್ಪೃಶ್ಯರಲ್ಲ:ನಗರದಚಲುವಾದಿ ಓಣಿಯಲ್ಲಿ ಮಾತನಾಡಿದ ಅವರು, "ಚಲುವಾದಿಯು ಅಸ್ಪೃಶ್ಯ ಸಮುದಾಯವಲ್ಲ. ವಾಸ್ತವದಲ್ಲಿ ರೆಡ್ಡಿ ಸಮುದಾಯಕ್ಕೂ ಚಲುವಾದಿ ಸಮುದಾಯಕ್ಕೂ ಸಹಸ್ರಾರು ವರ್ಷಗಳ ಅವಿನಾಭಾವ ನಂಟಿದೆ" ಎಂದು ಭಾವನಾತ್ಮಕವಾಗಿ ಜನರನ್ನು ಸೆಳೆದರು. "ನಾನು ಮೊದಲ ಆದ್ಯತೆ ನೀಡುವುದು ಕೆಲಸಕ್ಕೆ, ಎರಡನೇಯದ್ದು ಸ್ವಚ್ಛತೆಗೆ. ಗಂಗಾವತಿಯ ಜನ ನನಗೆ ಶಾಸಕನಾಗುವ ಅವಕಾಶ ನೀಡಿದ್ದೇ ಆದಲ್ಲಿ ಇನ್ನು ಮುಂದೆ ಗಂಗಾವತಿಯಲ್ಲಿ ಸ್ಲಂ ಎಂಬ ಪದ ಇರದ ಹಾಗೆ ಮಾಡುತ್ತೇನೆ. ನಾನು ನುಡಿದಂತೆ ನಡೆಯುವ ವ್ಯಕ್ತಿ. ನಾನು ಹೇಳುವ ಮಾತುಗಳನ್ನು ನೀವು ಬೇಕಾದರೆ ರೆಕಾರ್ಡ್ ಮಾಡಿಕೊಳ್ಳಿ. ನಾನು ನೀಡಿದ ಭರವಸೆಗಳನ್ನು ಚಾಚೂ ತಪ್ಪದೇ ಈಡೆರಿಸುತ್ತೇನೆ" ಎಂದರು.
ರೆಡ್ಡಿಗೆ ಅದ್ದೂರಿ ಸ್ವಾಗತ:ನಗರದ ವಾರ್ಡ್ಗಳಲ್ಲಿ ಸಂಚರಿಸುತ್ತಿರುವ ರೆಡ್ಡಿಗೆ ಭರ್ಜರಿ ಸ್ವಾಗತ ಸಿಗುತ್ತಿದೆ. ಮುಖ್ಯವಾಗಿ ಯುವಕರೇ ಹೆಚ್ಚಾಗಿ ರೆಡ್ಡಿ ಪರ ಘೋಷಣೆ ಕೂಗುವುದು, ಕಾರ್ಯಕ್ರಮ ಆಯೋಜನೆ ಮಾಡುವುದು, ರ‍್ಯಾಲಿ ಆಯೋಜಿಸುವ ಕಾರ್ಯ ಮಾಡುತ್ತಿದ್ದಾರೆ. ರೆಡ್ಡಿ ಸಂಚರಿಸುತ್ತಿರುವ ವಾರ್ಡ್ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಜನ ರೆಡ್ಡಿ ಸಮ್ಮುಖದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಅಲ್ಲದೇ ದೊಡ್ಡ-ದೊಡ್ಡ ಹೂವಿನ ಹಾರಗಳಿಂದ ರೆಡ್ಡಿಯನ್ನು ಅಭಿಮಾನಿಗಳು ಸ್ವಾಗತಿಸಿ ಗಮನ ಸೆಳೆಯುತ್ತಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ; ಮಹತ್ವದ ವಿಚಾರಗಳ ಚರ್ಚೆ