ಗಂಗಾವತಿ:ಮಾಜಿ ಸಚಿವ ಮತ್ತು ಗಣಿ ಉದ್ಯಮಿ ಜನಾರ್ದನರೆಡ್ಡಿ ಗಂಗಾವತಿಗೆ ಆಗಮಿಸುವ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಆನೆಗೊಂದಿಯ ಪಂಪಾಸರೋವರದಲ್ಲಿ ಹನುಮಮಾಲೆ ಧರಿಸುವ ಮೂಲಕ ರೆಡ್ಡಿ ಅಧಿಕೃತವಾಗಿ ಗಂಗಾವತಿಗೆ ಎಂಟ್ರಿ ಕೊಟ್ಟಿದ್ದಾರೆ.
ಬಿಜೆಪಿಯ ಕೆಲ ಬೆಂಬಲಿಗರು, ಕಾರ್ಯಕರ್ತರ ಸಮ್ಮುಖದಲ್ಲಿ ಪಂಪಾಸರೋವರದಲ್ಲಿ ತಮ್ಮ ಆಪ್ತಸ್ನೇಹಿತ ಶ್ರೀರಾಮುಲು ಅವರಿಂದ ಇತ್ತೀಚೆಗೆಷ್ಟೆ ಅಭಿವೃದ್ಧಿಯಾಗಿದ್ದ ಲಕ್ಷ್ಮಿ ದೇವಸ್ಥಾನದಲ್ಲಿ ರೆಡ್ಡಿ ಹನುಮ ಮಾಲೆ ಧರಿಸಿದರು. ಬಳಿಕ ಕೇಸರಿ ವಸ್ತ್ರಗಳನ್ನು ತೊಟ್ಟು ಅಂಜನಾದ್ರಿಯತ್ತ ಪಯಣ ಬೆಳೆಸಿದರು. ಇಂದಿನಿಂದ ಜನಾರ್ದನ ರೆಡ್ಡಿ ಹೊಸ ರಾಜಕೀಯ ಅಧ್ಯಾಯ ಆರಂಭಿಸುತ್ತಾರೆ ಎಂದು ಹೇಳಲಾಗುತ್ತಿದೆ.
ಹನುಮದ್ ವ್ರತದ ನಿಮಿತ್ತ ಹನುಮ ಮಾಲಾಧಾರಿಗಳಿಂದ ಗಂಗಾವತಿ ನಗರದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಬೃಹತ್ ಸಂಕೀರ್ತನಾ ಯಾತ್ರೆ ಯಾವುದೇ ಸಮಸ್ಯೆ ಇಲ್ಲದೇ ಮುಗಿಯಿತು. ಸಾಕಷ್ಟು ಬಿಗಿ ಭದ್ರತೆ ಕಲ್ಪಿಸಿದ್ದ ಪೊಲೀಸರು ಇದರಿಂದ ನಿಟ್ಟುಸಿರು ಬಿಟ್ಟರು.
ಸುಮಾರು ಇಪ್ಪತ್ತು ಸಾವಿರ ಮಾಲಾಧಾರಿಗಳು ಸಂಕೀರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಭದ್ರತೆ ಸುರಕ್ಷತೆಯ ದೃಷ್ಟಿಯಿಂದ ಸಾಕಷ್ಟು ಜನ ಭಕ್ತರು ಸ್ವಯಂ ಪ್ರೇರಣೆಯಿಂದಲೇ ರಾತ್ರಿ ಅಂಜನಾದ್ರಿ ಬೆಟ್ಟಕ್ಕೆ ತೆರಳಿದ್ದರು. ಹೀಗಾಗಿ ಕೇವಲ ಎಂಟರಿಂದ ಹತ್ತು ಸಾವಿರ ಭಕ್ತರು ಸಂಕೀರ್ತನಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.