ಗಂಗಾವತಿ (ಕೊಪ್ಪಳ):ಈಗ ಯಾರೆಲ್ಲ ಗಲಾಟೆ ಮಾಡುತ್ತಾರೋ ಅವರ ಹೆಸರು ಬರೆದಿಟ್ಟುಕೊಳ್ಳಿ ಎಂದು ಮತದಾನದ ಬಳಿಕ ಮಾಜಿ ಸಚಿವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರತ್ತ ಬೆರಳು ತೋರಿಸಿ ಹೇಳಿದ ಮಾತು ವೈರಲ್ ಆಗಿದೆ. ಇಲ್ಲಿನ ಎಪಿಎಂಸಿಯ ಮತಗಟ್ಟೆಯಲ್ಲಿ ರೆಡ್ಡಿ ಬೆಂಬಲಿತ ಏಜಂಟರು ಕೆಆರ್ಪಿಪಿ ಪಕ್ಷದ ಶಾಲು ಮತ್ತು ರೆಡ್ಡಿಯ ಹೆಸರಿನ ಬ್ಯಾಡ್ಜ್ ಧರಿಸಿ ಕುಳಿತಿದ್ದರು. ಇದಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದರು. ಘಟನೆಗೆ ಸಂಬಂಧಿಸಿದಂತೆ ಕೆಲಕಾಲ ಮತಗಟ್ಟೆಯ ಆವರಣದಲ್ಲಿಯೇ ಕೆಆರ್ಪಿಪಿ ಬೆಂಬಲಿತ ಕಾರ್ಯಕರ್ತರು ಹಾಗು ಬಿಜೆಪಿ - ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಮಾಹಿತಿ ತಿಳಿಯುತ್ತಿದ್ದಂತೆ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಸಹೋದರ ಅಖ್ತರ್ ಅನ್ಸಾರಿ ಸ್ಥಳಕ್ಕೆ ಆಗಮಿಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಒಟ್ಟುಗೂಡಿ ಮತಗಟ್ಟೆಯೊಳಗೆ ಪ್ರವೇಶಿಸಿ ಮತಗಟ್ಟೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಚುನಾವಣಾ ನೀತಿಗಳನ್ನು ಉಲ್ಲಂಘಿಸಿ ಹೇಗೆ ಕೆಆರ್ಪಿಪಿ ಪಕ್ಷದ ಕಾರ್ಯಕರ್ತರಿಗೆ ಚಿಹ್ನೆ, ಶಾಲು ಬಳಸಲು ಅವಕಾಶ ಮಾಡಿಕೊಟ್ಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದು ಮತಗಟ್ಟೆಯೊಳಗೆ ಮಾತಿನ ಚಕಮಕಿಗೆ ಕಾರಣವಾಗಿದ್ದು, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಮತಗಟ್ಟೆ ಅಧಿಕಾರಿಗಳು ನೀವು ರೆಡ್ಡಿಗೆ ಬುಕ್ ಆಗಿದ್ದೀರಿ ಎಂದು ಅಖ್ತರ್ ಅನ್ಸಾರಿ ನೇರವಾಗಿ ಟೀಕೆ ಮಾಡಿದರು.
ಸ್ಥಳಕ್ಕೆ ದೌಡಾಯಿಸಿದ ರೆಡ್ಡಿ:ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಜನಾರ್ದನ ರೆಡ್ಡಿ ಸಮ್ಮುಖದಲ್ಲಿಯೇ ಕಾಂಗ್ರೆಸ್ - ಬಿಜೆಪಿ ಕಾರ್ಯಕರ್ತರು ಒಂದಾಗಿ ಕೆಆರ್ಪಿಪಿ ನಾಯಕರ ಮೇಲೆ ಮುಗಿ ಬಿದ್ದಿದ್ದಾರೆ. ಸಮಾಧಾನಪಡಿಸಲು ಆಗಮಿಸಿದ್ದ ರೆಡ್ಡಿ ಕಾರು ಇಳಿಯುತ್ತಿದ್ದಂತೆಯೇ ಕಾರ್ಯಕರ್ತರ ಮಾತಿನ ಚಕಮಕಿ ಜೋರಾಗಿತ್ತು. ಈ ರೆಡ್ಡಿ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಮುಖ್ಯವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಇದನ್ನು ಟೀಕಿಸಿ ಟ್ರೋಲ್ ಮಾಡುತ್ತಿದ್ದಾರೆ.
ಗಂಗಾವತಿಯಲ್ಲಿ ಮತದಾನ: ಸೋಮವಾರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗಂಗಾವತಿ ಮತ ಕ್ಷೇತ್ರದಿಂದ ಸ್ಪರ್ಧಿಸಿರುವ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಮಾಜಿ, ಹಾಲಿ ಶಾಸಕ - ಸಚಿವರು ನಗರದ ವಿವಿಧ ಮತಗಟ್ಟೆಗಳಲ್ಲಿ ಮತದಾನ ಮಾಡಿದರು. ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಪರಣ್ಣ ಮುನವಳ್ಳಿ ಟಿಎಪಿಸಿಎಂಎಸ್ ಮತಗಟ್ಟೆಯಲ್ಲಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಗಂಗಾವತಿ ಅಭ್ಯರ್ಥಿ ಜಿ. ಜನಾರ್ದನ ರೆಡ್ಡಿ ಕನಕಗಿರಿ ರಸ್ತೆಯಲ್ಲಿರುವ ಉಗ್ರಾಣ ನಿಗಮದ ಆವರಣದಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಗಂಜ್ ಪ್ರದೇಶದ ಎಪಿಎಂಸಿಯ ಮತಗಟ್ಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್.ಆರ್.ಚನ್ನಕೇಶವ ತಮ್ಮ ಕುಟುಂಬ ಸಮೇತ ಆಗಮಿಸಿ ಕೆಇಬಿ ಮತಗಟ್ಟೆಯಲ್ಲಿ ಮತ ಹಾಕಿದರು.