ಗಂಗಾವತಿ (ಕೊಪ್ಪಳ):ಅನ್ಯ ಕ್ಷೇತ್ರದಿಂದ ಬಂದವರನ್ನು ಜನ ಫುಟ್‌ಬಾಲ್ ರೀತಿ ಒದ್ದರೆ ಅದು ಬಳ್ಳಾರಿಯಲ್ಲಿ ಹೋಗಿ ಗೋಲ್ ಆಗಬೇಕು ಎಂಬ ಇಕ್ಬಾಲ್ ಅನ್ಸಾರಿ ಅವರ ಈಚೆಗಿನ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಜನಾರ್ದನ ರೆಡ್ಡಿ, ಅವರು ಎಷ್ಟು ಗೋಲ್ ಹೊಡೆಯುತ್ತಾರೋ ನೋಡೋಣ ಎಂದು ತಿರುಗೇಟು ನೀಡಿದ್ದಾರೆ.
ಗಂಗಾವತಿಯಲ್ಲಿ ಮಾತನಾಡಿದ ಅವರು, ಹಿಂದೆ ಪರಣ್ಣ ಮುನವಳ್ಳಿಯವರನ್ನು ಗೆಲ್ಲಿಸುವುದಕ್ಕೆ ಇಲ್ಲಿಗೆ ಪ್ರಚಾರ ಮಾಡಲು ಬಂದಾಗ ಇಕ್ಬಾಲ್‌ರನ್ನು ಫುಟ್‌ಬಾಲ್ ರೀತಿಯಲ್ಲಿ ಆಡಿ ಹೊರಗೆ ಹಾಕಿ ಎಂದು ಹೇಳಿದ್ದೆ. ಇಂದು ಗಂಗಾವತಿ ಕ್ಷೇತ್ರದ ಜನರು ನನಗೋಸ್ಕರ ಪರಣ್ಣ ಮತ್ತು ಇಕ್ಬಾಲ್ ಇಬ್ಬರನ್ನೂ ಫುಟ್ ಬಾಲ್ ರೀತಿ ಆಡಿ ಸೋಲಿಸಬೇಕು ಎಂದು ಮನವಿ ಮಾಡಿದರು.
ನಾನು ನಿಮ್ಮ ಸೇವೆ ಮಾಡಲು ಕ್ಷೇತ್ರಕ್ಕೆ ಬಂದಿದ್ದೇನೆ. ಕ್ಷೇತ್ರದ ಅಭಿವೃದ್ಧಿಗಾಗಿ ಬಂದಿದ್ದೇನೆ. ರಾಜಕೀಯವಾಗಿ ಬೆಳೆದು ಇಲ್ಲಿಂದ ಹೋಗಬೇಕು ಎಂಬ ಉದ್ದೇಶದಿಂದ ಬಂದಿಲ್ಲ. ನನ್ನ ಎಷ್ಟೋ ಕನಸುಗಳನ್ನು ನನಸು ಮಾಡಲು ಬಂದಿದ್ದೇನೆ. ನನಗೆ ಆಶೀರ್ವಾದ ಮಾಡಿದರೆ ನಿಮ್ಮ ಋಣ ತೀರಿಸಲು ಈ ಜನಾರ್ದನ ರೆಡ್ಡಿ ಹೇಗೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾನೆ ಎಂಬುವುದನ್ನು ನೀವೇ ನೋಡಿ. ನನಗೆ ಹಣದ ಅಗತ್ಯವಿಲ್ಲ. ಕೇವಲ ಜನರ ಸೇವೆ ಮಾಡುವ ತುಡಿತವಿದೆ ಎಂದು ಹೇಳಿದರು.