ಗಂಗಾವತಿ: ಸಾವಿರಾರು ವರ್ಷಗಳ ಹಿಂದೆಯೇ ಪುಣ್ಯ ಕ್ಷೇತ್ರ ಎಂದು ಗುರುತಿಸಿಕೊಂಡಿರುವ ಕಿಷ್ಕಿಂಧೆಯ ಭಾಗವಾಗಿರುವ ಆನೆಗೊಂದಿ - ಅಂಜನಾದ್ರಿಯ ಹನುಮನ ಪಾದಗಟ್ಟೆಗೆ ಇಡೀ ಸರ್ಕಾರವೇ ಬರುವಂತೆ ಮಾಡುತ್ತೇನೆ ಎಂದು ಕೆಆರ್ಪಿಪಿ ಸಂಸ್ಥಾಪಕ ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಹೇಳಿದರು. ನಗರದ ಕನಕಗಿರಿ ರಸ್ತೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ಮಹಿಳೆಯರು-ಯುವಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಬಳಿಕ ಮಾತನಾಡಿದ ಅವರು, ರಾಮಾಯಣದ ಕಾಲಘಟ್ಟದಲ್ಲಿಯೇ ಕಿಷ್ಕಿಂಧೆ ಎಂಥ ಕ್ಷೇತ್ರ ಎಂಬುವುದು ಗೊತ್ತಾಗಿದೆ.
ಕಿಷ್ಕಿಂಧೆಯ ಬಗ್ಗೆ ರಾಜ್ಯದಲ್ಲಿ ಇಡೀ ಸರ್ಕಾರವೇ ಗಮನ ಸಳೆಯುವಂತೆ ಮಾಡುತ್ತೇನೆ. ಅದರಲ್ಲೂ ವಿಶೇಷವಾಗಿ ಕಲ್ಯಾಣ ಕರ್ನಾಟಕದ ಮೇಲೆ ಪಕ್ಷ ಹೆಚ್ಚಿನ ಗಮನ ಕೇಂದ್ರೀಕರಿಸಿದೆ. ರಾಜ್ಯದಲ್ಲಿ ಒಟ್ಟು 30ರಿಂದ 40ಸ್ಥಾನಗಳು ನಮ್ಮ ಪಕ್ಷಕ್ಕೆ ಸಿಗಲಿವೆ ಎಂದು ತಿಳಿಸಿದರು. ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬಂದರೂ ನಮ್ಮ ಸಹಕಾರ ಪಡೆಯಬೇಕಾಗುತ್ತದೆ. ಯಾವುದೇ ಸರ್ಕಾರ ಬಂದರೂ ನನ್ನ ಮೊದಲ ಆದ್ಯತೆ ಹನುಮನ ನಾಡನ್ನು ವಿಶ್ವವಿಖ್ಯಾತ ಮಾಡುವುದೇ ಆಗಿದೆ ಎಂದರು.
ಮನೆಯ ಮಗನಾಗಿ ಸೇವೆ ಸಲ್ಲಿಸುತ್ತೇನೆ: ರಾಜ್ಯಕ್ಕೆ ಒಳಿತನ್ನು ಮಾಡಬೇಕು ಎಂಬುವುದು ನನ್ನ ಯೋಚನೆ. ನನ್ನನ್ನು ಬೆಂಬಲಿಸಿದರೆ ಈ ಕ್ಷೇತ್ರದಲ್ಲಿ ನಿಮ್ಮ ಮನೆಯ ಮಗನಾಗಿ ನಾನು ಸೇವೆ ಸಲ್ಲಿಸುತ್ತೇನೆ. ನನ್ನ ಮೇಲೆ ವಿಶ್ವಾಸ ಇಟ್ಟು ದೊಡ್ಡ ಪ್ರಮಾಣದಲ್ಲಿ ಜನ ಪಕ್ಷಕ್ಕೆ ಬರುತ್ತಿದ್ದಾರೆ. ನಾನು ಸಚಿವನಾಗಿದ್ದಾಗ ತಾಯಿ ಹೇಮರೆಡ್ಡಿ ಮಲ್ಲಮ್ಮ ಮತ್ತು ವೇಮನರ ಆದರ್ಶ ಸಮಾಜಿಕ ಸೇವೆಗಳು ಜನರಿಗೆ ತಿಳಿಸುವ ಉದ್ದೇಶಕ್ಕಾಗಿ ಸರ್ಕಾರದಿಂದಲೇ ಜಯಂತಿ ಆಚರಿಸುವ ಪ್ರಮಾಣಿಕ ಪ್ರಯತ್ನ ನಾನು ಮಾಡಿದ್ದೆ ಎಂದು ಇದೇ ವೇಳೆ ರೆಡ್ಡಿ ತಿಳಿಸಿದರು.
ಮುಂದಿನ ನಾಲ್ಕು ತಿಂಗಳು ನಾನು ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಇರಲು ಸಾಧ್ಯವಾಗದೇ ಇದ್ದರೂ ಪಕ್ಷದ ಜೀವಾಳವಾಗಿರುವ ನೀವೇ ಎಲ್ಲವನ್ನೂ ಮುಂದಾಳತ್ವವಹಿಸಿಕೊಂಡು ಚುನಾವಣೆ ಎದುರಿಸಬೇಕು. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷನಾಗಿ ನಾನು ಇಡೀ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡಿ ಚುನಾವಣೆಗೆ ಅಣಿಗೊಳಿಸಬೇಕಿರುವ ಕಾರಣಕ್ಕೆ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಆಗದೇ ಹೋದರೂ ನೀವೇ ನಿಭಾಯಿಸಬೇಕು ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರದ ನಾನಾ ಹೋಬಳಿಯ ಸುಮಾರು ಒಂದು ಸಾವಿರಕ್ಕೂ ಅಧಿಕ ಮಹಿಳೆಯರು-ಯುವಕರು ನಾನಾ ಪಕ್ಷಗಳನ್ನು ತೊರೆದು ರೆಡ್ಡಿ ಸಮ್ಮುಖದಲ್ಲಿ ಶಾಲು ಹಾಕಿಸಿಕೊಳ್ಳುವ ಮೂಲಕ ಪಕ್ಷಕ್ಕೆ ಅಧಿಕೃತ ಸೇರ್ಪಡೆಯಾದರು.
ಬಿಜೆಪಿ ತೊರೆದು ಕೆಆರ್ಪಿಪಿ ಸೇರಿದ ಕಾರ್ಯಕರ್ತರು: ಇನ್ನೂ ಇತ್ತೀಚೆಗೆ ಕೊಪ್ಪಳ ಜಿಲ್ಲೆಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಜಿಲ್ಲೆಯ ಬಿಜೆಪಿ ಮುಖಂಡರು ಸೇರಿದಂತೆ ಪಕ್ಷದ ಅನೇಕ ಕಾರ್ಯಕರ್ತರು ಪಕ್ಷವನ್ನು ತೊರೆದು ಜನಾರ್ದನ ರೆಡ್ಡಿ ಅವರ ಕೆಆರ್ಪಿಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಬಿಜೆಪಿ ಪಕ್ಷದ ನಾನಾ ಜವಾಬ್ದಾರಿಯುತ ಹಾಗೂ ಆಯಾಕಟ್ಟಿನ ಸ್ಥಾನಗಳಲ್ಲಿದ್ದ ಪ್ರಮುಖರು ಕೆಆರ್ಪಿಸಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಗೊಂಡಿದ್ದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮನೋಹರಗೌಡ ಹೇರೂರು, ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಯಮನೂರ ಚೌಡ್ಕಿ, ಶಿವಕುಮಾರ ಆದೋನಿ, ನಾಗರಾಜ ಚಳಿಗೇರಿ, ವೀರೇಶ ಸುಳೇಕಲ್, ವೀರೇಶ ಬಲ್ಕುಂದಿ, ಗ್ರಾಮೀಣ ಘಟಕದ ಮಾಜಿ ಅಧ್ಯಕ್ಷ ದುರುಗಪ್ಪ ಆಗೋಲಿ, ರೈತ ಮೋರ್ಚಾ ಜಿಲ್ಲಾ ಮುಖಂಡ ಚನ್ನವೀರನಗೌಡ ಕೋರಿ, ಯುವ ಮುಖಂಡ ಹೀರೂರು ಚಂದ್ರು, ದುರುಗಪ್ಪ ದಳಪತಿ, ಶಂಬುನಾಥ ಚಲುವಾದಿ, ರವೀಂದ್ರ ಹಿರೇಮಠ, ವಾಲ್ಮಿಕಿ ಸಮುದಾಯದ ಆನಂದ್ ಗೌಡ ಬೆಣಕಲ್, ಭಾಗ್ಯವಂತ ನಾಯಕ ಹತ್ತಿಮರದ, ಸಿದ್ದು ಮುದ್ದೆಬೀಹಾಳ, ಆಕಾಶ, ಬೆಟ್ಟಪ್ಪ ಎನ್ನುವವರು ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.
ಇದನ್ನೂ ಓದಿ:ರೆಡ್ಡಿಯ ಕೆಆರ್ಪಿಪಿ ಪಕ್ಷಕ್ಕೆ ಜಿಲ್ಲಾಮಟ್ಟದ ಬಿಜೆಪಿ ಮುಖಂಡರು, ಕಾರ್ಯಕರ್ತರ ಸೇರ್ಪಡೆ