ಗಂಗಾವತಿ:ಪುನೀತ್ ರಾಜ್ಕುಮಾರ್ ಅವರ ಕೊನೆಯ ಚಿತ್ರ ಜೇಮ್ಸ್ಗೆ ರಾಜ್ಯದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದರ ಮಧ್ಯೆ ಜೇಮ್ಸ್ ಚಿತ್ರ ಇರುವ ಸಿನಿಮಾ ಮಂದಿರಗಳಲ್ಲಿ ಒಂದು ಶೋ `ದಿ ಕಾಶ್ಮೀರಿ ಫೈಲ್'ಗೆ ಬಿಟ್ಟುಕೊಡಿ ಎಂಬ ಒತ್ತಡ ಬರುತ್ತಿವೆ ಎಂದು ಜೇಮ್ಸ್ ಚಿತ್ರದ ನಿರ್ಮಾಪಕ ಪತ್ತಿಕೊಂಡ ಕಿಶೋರ
ಹೇಳಿದರು.
ಜೇಮ್ಸ್ ಚಿತ್ರದ ನಿರ್ಮಾಪಕ ಪತ್ತಿಕೊಂಡ ಕಿಶೋರ್ ಮಾತನಾಡಿದರು ಅಪ್ಪು ಅಭಿಮಾನಿಗಳು ನಿರ್ಮಿಸಿರುವ ಪುನೀತ್ ಪುತ್ಥಳಿ ವೀಕ್ಷಿಸಲು ನಗರದ ಶಿವ ಚಿತ್ರಮಂದಿರಕ್ಕೆ ಆಗಮಿಸಿದ್ದ ಅವರು, ಈ ಬಗ್ಗೆ ಮಾತನಾಡಿದರು. ಇಡೀ ರಾಜ್ಯದಾದ್ಯಂತ ಜೇಮ್ಸ್ ಚಿತ್ರ ಜಾತ್ರೆಯ ರೂಪದಲ್ಲಿ ಪ್ರದರ್ಶನವಾಗುತ್ತಿದೆ. ಇದರ ಮಧ್ಯೆಯೂ ಕೆಲ ಚಿತ್ರ ಮಂದಿರಗಳಲ್ಲಿ 'ದಿ ಕಾಶ್ಮೀರ ಫೈಲ್' ಚಿತ್ರಕ್ಕೆ ಕನಿಷ್ಟ ಒಂದು ಶೋ ಪ್ರದರ್ಶನಕ್ಕಾದರೂ ಅವಕಾಶ ಕೊಡಿ ಎಂದು ಒತ್ತಡ ಬರುತ್ತಿವೆ. ಆದರೆ, ಇದಕ್ಕೆ ಆಸ್ಪದ ಕೊಟ್ಟಿಲ್ಲ. ಬೆಳಗ್ಗೆ ಎಂಟು ಗಂಟೆಗೆ ಬೇಕಿದ್ದರೆ ಸಿನಿಮಾ ಪ್ರದರ್ಶನ ಮಾಡಿ ಎಂದು ಮನವಿ ಮಾಡಿಕೊಂಡಿದ್ದೇನೆ ಎಂದರು.
ಬೆಳಗ್ಗೆ ಹನ್ನೊಂದರಿಂದ ಜೇಮ್ಸ್ ಚಿತ್ರವನ್ನು ಕಡ್ಡಾಯವಾಗಿ ನಾಲ್ಕು ಶೋ ಪ್ರದರ್ಶನ ಮಾಡುವ ಮೂಲಕ ಅಪ್ಪು ಅಭಿಮಾನಿಗಳಿಗೆ ಅವಕಾಶ ಮಾಡಿಕೊಡುವಂತೆ ಚಿತ್ರ ಮಂದಿರದ ಮಾಲೀಕರಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಖುಷಿ ಪಡಬೇಕೋ-ವ್ಯಥೆ ಪಡಬೇಕೋ ಅರ್ಥವಾಗ್ತಿಲ್ಲ: ಜೆಮ್ಸ್ ಖಳನಾಯಕನ ಕಣ್ಣೀರು
ನಾನು ಕನ್ನಡಿಗನಾಗಿ ಮೊದಲ ಸಿನಿಮಾದಲ್ಲಿ ಅಪ್ಪು ಅವರೊಂದಿಗೆ ನಟಿಸಿದ್ದೇನೆ. ಇದಕ್ಕೆ ಖುಷಿ ಪಡಬೇಕೋ ಅಥವಾ ಅಪ್ಪು ಜೊತೆ ನಟಿಸಿರುವ ಕೊನೆಯ ಸಿನಿಮಾ ಎಂಬುದಕ್ಕೆ ವ್ಯಥೆ ಪಡಬೇಕೋ ಅರ್ಥ ಆಗ್ತಿಲ್ಲ ಎಂದು ಜೇಮ್ಸ್ ಚಿತ್ರದ ಪ್ರಧಾನ ಖಳನಾಯಕ ಶ್ರೀಕಾಂತ್ ಕಣ್ಣೀರಿಟ್ಟರು. ಮೂಲತಃ ತಾಲೂಕಿನ ಬಸವಪಟ್ಟಣ ಗ್ರಾಮದ ಶ್ರೀಕಾಂತ್, ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಜೇಮ್ಸ್ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡದ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.
ಜೇಮ್ಸ್ ಖಳನಾಯಕ ಶ್ರೀಕಾಂತ್ ಅವರು ಕಣ್ಣೀರು ಹಾಕಿದರು ಜೇಮ್ಸ್ ಯಶಸ್ವಿ ಪ್ರದರ್ಶನದ ಹಿನ್ನೆಲೆಯಲ್ಲಿ ನಗರದ ಶಿವ ಚಿತ್ರಮಂದಿರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ನಾನು ಬಾಲ್ಯದಿಂದಲೂ ಕನ್ನಡದಲ್ಲಿ ರಾಜ್ಕುಮಾರ್ ಮತ್ತು ತೆಲುಗಿನಲ್ಲಿ ಚಿರಂಜೀವಿ ಕುಟುಂಬದ ಅಭಿಮಾನಿ. ಇದೇ ಮೊದಲ ಬಾರಿಗೆ ಪುನೀತ್ ಜೊತೆ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದಿದ್ದೇನೆ. ಇದಕ್ಕೆ ಖುಷಿ ಪಡಬೇಕೋ ಅಥವಾ ಪುನೀತ್ ಇನ್ನಿಲ್ಲ ಎಂಬ ಕಾರಣಕ್ಕೆ ವ್ಯಥೆ ಪಡಬೇಕೋ ಗೊತ್ತಾಗುತ್ತಿಲ್ಲ. ಪ್ರತಿ ಚಿತ್ರಮಂದಿರದ ಮುಂದೆಯೂ ಹಬ್ಬದ ವಾತಾವರಣವಿದೆ ಎಂದರು.
ಇದನ್ನೂ ಓದಿ:ನಯನತಾರಾ, ವಿಘ್ನೇಶ್ ಶಿವನ್ 'ರೌಡಿ ಪಿಕ್ಚರ್ಸ್' ವಿರುದ್ಧ ಪೊಲೀಸರಿಗೆ ದೂರು