ಕುಷ್ಟಗಿ (ಕೊಪ್ಪಳ):ತನ್ನ ಮನೆಗೆ ನಳದ ಸಂಪರ್ಕ ಕಲ್ಪಿಸಿಲ್ಲ ಎಂದು ಜಲ ಜೀವನ ಮಿಷನ್ ಯೋಜನೆ ಅಡಿಯಲ್ಲಿ (Jal Jeevan Mission) ಅಳವಡಿಸಿದ ಮುಖ್ಯ ನಲ್ಲಿಯ ಸಂಪರ್ಕ ಕಡಿದು ಹಾಕಿದ್ದ ವ್ಯಕ್ತಿಯ ವಿರುದ್ಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಕ್ಷುಲ್ಲಕ ಕಾರಣಕ್ಕೆ ಜಲ ಜೀವನ್ ಮಿಷನ್ ಮುಖ್ಯ ಕೊಳವೆ ದ್ವಂಸ ತಾಲೂಕಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಮನೆ ಮನೆಗೆ ನಳದ ಸಂಪರ್ಕ ಕಲ್ಪಿಸಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಕೈಗೊಳ್ಳಲಾಗಿರುವ ಈ ಯೋಜನೆಯಲ್ಲಿ ದೊಣ್ಣಗುಡ್ಡ ಗ್ರಾಮಕ್ಕೆ 95 ನಳಗಳ ಸಂಪರ್ಕ ಕಲ್ಪಿಸಲಾಗಿದೆ. ಸದರಿ ಗ್ರಾಮಕ್ಕೆ ಜಲ ಜೀವನ ಮಿಷನ್ ಕಾಮಗಾರಿ ಪರಿವೀಕ್ಷಣೆಗೆ ಗೆ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಆಯುಕ್ತ ಪ್ರಕಾಶಕುಮಾರ ಅಗಮಿಸಿದ್ದರು. ಈ ಸಂದರ್ಭದಲ್ಲಿ ಮೈಲಾರಪ್ಪ ದೇವೇಂದ್ರಪ್ಪ ಗ್ವಾಡಿ ಎಂಬಾತ, ಆಯುಕ್ತರಲ್ಲಿ ತಮ್ಮ ಮನೆಗೆ ನಳದ ಸಂಪರ್ಕ ಕಲ್ಪಿಸಿಲ್ಲ ಎಂದು ದೂರು ನೀಡಿದ್ದ.
ತಕ್ಷಣವೇ ಸದರಿ ಆಯುಕ್ತರು, ಮೈಲಾರಪ್ಪ ಗ್ವಾಡಿ ಮನೆಗೆ ನಳದ ಸಂಪರ್ಕ ಕಲ್ಪಿಸಲು ಸಂಬಂಧಿಸಿದ ಎಇಇ ಶ್ಯಾಮಣ್ಣ ನಾರಿನಾಳ ಅವರಿಗೆ ನಿರ್ದೇಶನ ನೀಡಿದ್ದರು. ಮೈಲಾರಪ್ಪ ಗ್ವಾಡಿ ಮನೆಗೆ ಪ್ರತ್ಯೇಕವಾಗಿ ನಳದ ಸಂಪರ್ಕದ ಸಲುವಾಗಿ ಮೇಲಾಧಿಕಾರಿಗಳ ಅನುಮತಿ ಪಡೆಯಬೇಕಿತ್ತು. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ನಳದ ಸಂಪರ್ಕದ ಭರವಸೆ ನೀಡಿದ್ದರು. ಆದರೆ ಇಷ್ಟಕ್ಕೂ ಸುಮ್ಮನಾಗದ ಮೈಲಾರಪ್ಪ ಗ್ವಾಡಿ ದುರ್ಗಾದೇವಿ ದೇವಸ್ಥಾನದ ಹಿಂಬದಿಯ ಶುದ್ಧೀಕರಣದ ಪೈಪಲೈನ್ ಕಡಿದು ಹಾಕಿದ್ದಾನೆ.
ಈ ಬಗ್ಗೆ ವಿಚಾರಿಸಿದರೆ, ಪೊಲೀಸರಿಗೆ ಕಂಪ್ಲೇಂಟ್ ಕೊಡ್ತೀರಾ ಕೊಡ್ರೀ ಎಂದು ಸಂಬಂಧಿಸಿದ ಅಧಿಕಾರಿಗೆ ಹವಾಜ್ ಹಾಕಿದ್ದಾನೆ. ಈ ಹಿನ್ನೆಲೆಯಲ್ಲಿ ಆರೋಪಿ ಮೈಲಾರಪ್ಪ ಗ್ವಾಡಿ ವಿರುದ್ಧ ಸರ್ಕಾರಿ ಅಸ್ತಿ ನಾಶ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.