ಕುಷ್ಟಗಿ (ಕೊಪ್ಪಳ): ತಾಲೂಕಿನ ನಿಡಶೇಷಿ ಗ್ರಾಮ ವ್ಯಾಪ್ತಿಯಲ್ಲಿರುವ ತೋಟಗಾರಿಕೆ ಇಲಾಖೆಯ ಕರ್ನಾಟಕ ರಾಜ್ಯ ತೋಟಗಾರಿಕೆ ಅಭಿವೃದ್ಧಿ ಏಜೆನ್ಸಿ (ಕೆ.ಎಸ್.ಹೆಚ್.ಡಿ.ಎ)ಯ ಇಸ್ರೇಲ್ ಮಾದರಿಯಲ್ಲಿ ದಾಳಿಂಬೆ ಅರ್ಲಿ ಭಗವಾ ರೋಗ ನಿರೋಧಕ ತಳಿ ನರ್ಸರಿ ಬೆಳೆಸಲಾಗುತ್ತಿದೆ.
ತೋಟಗಾರಿಕಾ ಕ್ಷೇತ್ರ 20 ಗುಂಟೆ ಪಾಲಿಹೌಸ್ ನಲ್ಲಿ ಇಸ್ರೇಲ್ ತಂತ್ರಜ್ಞಾನದ ರೋಗಮುಕ್ತ ವಾತಾವರಣದಲ್ಲಿ ಬೆಳೆಸಲಾಗುತ್ತಿದೆ. ಅರ್ಲಿ ಭಗವಾ ಹೆಸರಿನ ರೋಗ ನಿರೋಧಕ ವಿಶೇಷ ತಳಿಯನ್ನು ವಿಶೇಷವಾಗಿ 250 ಸಿಮೆಂಟ್ ಕಾಂಕ್ರೀಟ್ ರಿಂಗ್ ಗಳಲ್ಲಿ ಫಲವತ್ತಾದ ಮಣ್ಣು ಪೂರಕ ಲಘು ಪೋಷಕಾಂಶಯುಕ್ತವಾಗಿ ಈ ಸಸಿಗಳನ್ನು ನಾಟಿ ಮಾಡಲಾಗಿದೆ.
ಸಾಮಾನ್ಯವಾಗಿ ದಾಳಿಂಬೆ ನರ್ಸರಿ ಗಿಡಗಳ ಟೊಂಗೆ ಕತ್ತರಿಸಿ ಗೋಟಿ ಕಟ್ಟುವ ಮಾದರಿಯಲ್ಲಿತ್ತು. ಈ ಇಸ್ರೇಲ್ ತಂತ್ರಜ್ಞಾನದಲ್ಲಿ ದಾಳಿಂಬೆ ಗಿಡದ ಜಿಗುರೊಡೆದ ಕಡ್ಡಿಗಳಿಂದ ಗುಣಮಟ್ಟದ ನರ್ಸರಿ ಬೆಳೆಸಲಾಗುತ್ತಿದೆ. ನರ್ಸರಿ ಗುಣಮಟ್ಟದಿಂದ ಪ್ರಾಮಾಣೀಕರಿಸಿದ ಹಾಗೂ ರೋಗ ನಿರೋಧಕ ಸಸಿಗಳನ್ನು ಬೆಳೆಸಲಾಗುತ್ತಿದೆ.
ಈ ಕುರಿತು ಸಹಾಯಕ ತೋಟಗಾರಿಕೆ ಅಧಿಕಾರಿ ಆಂಜನೇಯ ದಾಸರ ಅವರು ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಮಾತನಾಡಿ, ಸದ್ಯ ದಾಳಿಂಬೆ ಬೇಡಿಕೆ ಹಿನ್ನೆಲೆಯಲ್ಲಿ ತೋಟಗಾರಿಕೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ್ ಮಾರ್ಗದರ್ಶನ ನೀಡಿದ್ದಾರೆ. ಇಸ್ರೇಲ್ ತಂತ್ರಜ್ಞಾನ ಆಧಾರಿತವಾಗಿ ಪಾಲಿಹೌಸ್ ನಲ್ಲಿ ಹವಾನಿಯಂತ್ರಿತ ವ್ಯವಸ್ಥೆ, ರೋಗ ರುಜಿನ ಸೋಕದಂತೆ ನಿರ್ಬಂಧಿತ ಪ್ರದೇಶದಲ್ಲಿ ರೋಗ ಮುಕ್ತವಾಗಿ ಬೆಳೆಸಲಾಗಿದೆ. ಬೇಡಿಕೆಗನುಗುಣವಾಗಿ ಪೂರೈಸುವ ವ್ಯವಸ್ಥೆ ಮಾಡಲಾಗಿದ್ದು, ಆಸಕ್ತರು ದಾಳಿಂಬೆ ಬೆಳೆಗಾರರನ್ನು ಸಂಪರ್ಕಿಸಿ ಇದರ ಸದುಪಯೋಗ ಪಡೆಯಬಹುದಾಗಿದೆ ಎಂದರು.