ಕುಷ್ಟಗಿ: ಕೊಪ್ಪಳದ ಕುಷ್ಟಗಿಯ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯುತ್ತಿದ್ದು, ಹೊರಗಡೆಯಿಂದ ಬಿಗಿ ವಾತಾವರಣ ಕಂಡು ಬಂದರೂ, ಒಳಗಡೆ ಮಾತ್ರ ಅವ್ಯವಹಾರ ನಡೆದಿರುವ ಆರೋಪ ಕೇಳಿ ಬಂದಿದೆ.
ಇಂದು ಗಣಿತ ಪರೀಕ್ಷೆ ನಡೆಯುತ್ತಿದ್ದು, ಸಿಸಿ ಕ್ಯಾಮರಾಗಳ ಕಣ್ಗಾವಲಿನ ಮಧ್ಯೆಯೂ ಪರೀಕ್ಷಾ ಕೊಠಡಿಯ ಒಳಗಡೆ ಹೋಗಿ ವಿಷಯ ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತರ ಹೇಳುತ್ತಿರುವುದು ಕಂಡು ಬಂದಿದೆ.
ಕುಷ್ಟಗಿಯ ಪರೀಕ್ಷಾ ಕೇಂದ್ರದಲ್ಲಿ ಅವ್ಯವಹಾರ ಪರೀಕ್ಷೆ ವೇಳೆ ವಿಷಯ ಶಿಕ್ಷಕರನ್ನು ಬಳಸಿಕೊಳ್ಳುವ ಹಾಗಿಲ್ಲ. ಆದರೆ, ಕೊಠಡಿ ಮೇಲ್ವಿಚಾರಕ ಹೊರಗೆ ನಿಂತಿದ್ದಾಗಲೇ ಗಣಿತ ಶಿಕ್ಷಕ ಪ್ರತ್ಯಕ್ಷರಾಗಿದ್ದಾರೆ. ಈ ಕುರಿತು ಮೇಲ್ವಿಚಾರಕರನ್ನು ವಿಚಾರಿಸಿದರೆ ಗಣಿತ ಶಿಕ್ಷಕನನ್ನು ರಿಲಿವರ್ ಎಂದು ಹೇಳಿ ನುಣುಚಿಕೊಳ್ಳಲು ಯತ್ನಿಸಿದ್ದಾರೆ.
ಇನ್ನು ಕಾಲೇಜಿನ ಒಳಾಂಗಣದಲ್ಲಿ ಹಳೆ ಸ್ಟಾಪ್ ರೂಂ ಕೊಠಡಿಯಲ್ಲಿ ಕಿಟಕಿ ಬೆಳಕಿನಲ್ಲಿ ಶಿಕ್ಷಕರೊಬ್ಬರು ಗಣಿತ ಪ್ರಶ್ನೆ ಪತ್ರಿಕೆಗೆ ಉತ್ತರ ಬಿಡಿಸುತ್ತಿರುವ ದೃಶ್ಯ ಕೂಡ ಮೊಬೈಲ್ನಲ್ಲಿ ಸೆರೆಯಾಗಿದೆ.