ಗಂಗಾವತಿ :ಅನ್ಯ ಜಾತಿಯ ಯುವತಿಯನ್ನು ಮದುವೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಕೋಮು ಘರ್ಷಣೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಒಬ್ಬ ತೀವ್ರಗಾಯಗೊಂಡ ಘಟನೆ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಹುಲಿಹೈದರ ಗ್ರಾಮದ ಪಾಷಾವಲಿ ಮೊಹಮ್ಮದ್ ಸಾಬ (27) ಹಾಗೂ ಯಂಕಪ್ಪ ಶಾಮಪ್ಪ ತಳವಾರ (44) ಎಂದು ಗುರುತಿಸಲಾಗಿದೆ.
ಮತ್ತೊಬ್ಬ ಯುವಕ ಧರ್ಮಣ್ಣ ನಾಗಲಿಂಗಪ್ಪ ಎಂಬುವವರು ತೀವ್ರ ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಖಚಿತ ಕಾರಣ ಗೊತ್ತಾಗುತ್ತಿಲ್ಲವಾದರೂ ಮೇಲ್ನೋಟಕ್ಕೆ ಅನ್ಯಜಾತಿಯ ವಿವಾಹವೇ ಪ್ರಕರಣಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಮೃತ ಯುವಕ ಪಾಷಾವಲಿ ಕಳೆದ ಕೆಲ ದಿನಗಳ ಹಿಂದ ತಳವಾರ ಸಮುದಾಯದ ಯುವತಿಯೊಬ್ಬರನ್ನು ಮದುವೆಯಾಗಿದ್ದ ಎನ್ನಲಾಗಿದೆ.
ಇದಕ್ಕೆ ತಳವಾರ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಇದು ಬೂದಿ ಮುಚ್ಚಿದ ಕೆಂಡದಂತೆ ಇತ್ತು ಎಂದು ಹೇಳಲಾಗುತ್ತಿದೆ. ಗುರುವಾರ ಹೂವು ತರಲು ಪಾಷಾವಲಿ ತಳವಾರ ಓಣಿಗೆ ಹೋದಾಗ ಅಲ್ಲಿ ಯಂಕಪ್ಪ ತಳವಾರ ಎಂಬುವವರು ಈ ಯುವಕನನನ್ನು ಕರೆದೊಯ್ದು ಥಳಿಸಿದ್ದಾರೆ ಎನ್ನಲಾಗಿದೆ. ಈ ಮಾಹಿತಿ ಗೊತ್ತಾಗುತಿದ್ದಂತೆಯೇ ಮತ್ತೊಂದು ಸಮುದಾಯದ ನೂರಾರು ಯುವಕರು ಯಂಕಪ್ಪನ ಮನೆಯ ಮೇಲೆ ದಾಳಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಯಂಕಪ್ಪನಿಗೆ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆಗೆ ದಾಖಲಿಸುವ ಸಂದರ್ಭದಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇದೀಗ ಗ್ರಾಮದಲ್ಲಿ ಉದ್ವಿಗ್ನ ವಾತಾವರಣವಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಂಗ್ಶು ಗಿರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗ್ರಾಮದಲ್ಲಿ ಪೊಲೀಸರು ಬೀಡು ಬಿಟ್ಟಿದ್ದು, 144ನೇ ಕಲಂ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಇದನ್ನೂ ಓದಿ :ಗುಂಡು ಹಾರಿಸಿ ಹೆಂಡತಿ ಕೊಂದ ಗಂಡ.. ಬೆಚ್ಚಿಬಿದ್ದ ಕೊಡಗು