ಅಪ್ರಕಟಿತ ಶಾಸನದ ಬೆನ್ನಲ್ಲೇ ಆನೆಗೊಂದಿಯ ರಾಣಿ ಕುಪ್ಪಮ್ಮಳ ಶಾಸನ ಪತ್ತೆ ಗಂಗಾವತಿ:ತಾಲ್ಲೂಕಿನ ಕಡೆಬಾಗಿಲು ಪ್ರದೇಶದಲ್ಲಿರುವ ತಾರಾ ಪರ್ವತದಲ್ಲಿ ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದ್ದು ಎನ್ನಲಾದ ಅಪ್ರಕಟಿತ ಬೃಹತ್ ಬಂಡೆಯ ಮೇಲೆ ಶಿಲಾ ಶಾಸನ ಪತ್ತೆಯಾದ ಬೆನ್ನಲ್ಲೇ ಇದೀಗ ತಾಲ್ಲೂಕಿನ ಸಣಾಪುರದಲ್ಲಿ ಆನೆಗೊಂದಿ ಸಂಸ್ಥಾನದ ರಾಣಿ ಕುಪ್ಪಮ್ಮಳ ಶಾಸನವೊಂದು ಪತ್ತೆಯಾಗಿದೆ.
ಸಣಾಪುರ ಗ್ರಾಮದಲ್ಲಿ ಆನೆಗೊಂದಿಯ ನರಪತಿ ಸಂಸ್ಥಾನದ ಆಳ್ವಿಕೆ ಮಾಡುತ್ತಿದ್ದ ರಾಣಿ ಕುಪ್ಪಮ್ಮಳಿಗೆ ಸೇರಿದ ಶಾಸನವನ್ನು ಗಂಗಾವತಿಯ ಇತಿಹಾಸ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಕೆ.ಬಿ ಗೌಡಪ್ಪನವರ್ ತಂಡ ಶಾಸನವನ್ನು ಪತ್ತೆ ಹಚ್ಚಿದ್ದಾರೆ. 15ನೇ ಶತಮಾನದಲ್ಲಿ ವಿಜಯಪುರದ ಆದಿಲ್ ಶಾಹಿಗಳ ದಾಳಿಯಿಂದ ವಿಜಯನಗರ ಪತನವಾದ ನಂತರ ಭಾರತದಲ್ಲಿ ಬ್ರಿಟಿಷ್ ಆಡಳಿತ ಆರಂಭವಾಗುವವರೆಗೂ ಆನೆಗೊಂದಿಯಲ್ಲಿ ಅಸ್ತಿತ್ವದಲ್ಲಿದ್ದ ನರಪತಿ ಸಂಸ್ಥಾನದ ಕಾಲಘಟ್ಟದಲ್ಲಿ ಈ ಶಾಸನ ರಚಿಸಲಾಗಿದೆ ಎಂದು ತಿಳಿದುಬಂದಿದೆ.
ಸ್ಥಳೀಯರಿಂದ ನಿತ್ಯ ಪೂಜೆ:ತುಂಗಭದ್ರಾ ನದಿಯ ಸಣಾಪುರ ಜಲಾಶಯದ ಎಡಭಾಗದ ಮೇಲಿರುವ ಗಂಗಾಪರಮೇಶ್ವರಿ ದೇವಾಲಯದಲ್ಲಿ ಈ ಶಾಸನವನ್ನು ಸ್ಥಳೀಯರು ಸಂರಕ್ಷಿಸಿಟ್ಟಿದ್ದು, ನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ. ಶಿಲಾಶಾಸನದ ಮೇಲೆ 12 ಸಾಲುಗಳಲ್ಲಿ ಬರಹಗಳನ್ನು ಕೆತ್ತಲಾಗಿದೆ. ಈ ಶಾಸನದಲ್ಲಿ 1309ರ ಫಸಲಿ ಸನ್ (ವರ್ಷ) ಎಂದು ಉಲ್ಲೇಖಿಸಲಾಗಿದ್ದು, ಅದನ್ನು ಈಗಿನ ಆಂಗ್ಲ ಕ್ಯಾಲೆಂಡರ್ಗೆ ಹೋಲಿಸಿದರೆ ಕ್ರಿ.ಶ. 1899ಕ್ಕೆ ಸರಿ ಹೊಂದುತ್ತದೆ ಎಂದು ಇತಿಹಾಸಕಾರ ಶರಣಬಸಪ್ಪ ಕೋಲ್ಕಾರ ತಿಳಿಸಿದ್ದಾರೆ.
ಆನೆಗೊಂದಿಯ ರಾಣಿ ಕುಪ್ಪಮ್ಮಳ ಶಾಸನ ಶಾಸನದಲ್ಲಿ ದತ್ತಿ ವಿಚಾರ ಪ್ರಸ್ತಾಪ:ಶಾಸನವು ರಾಣಿ ಕುಪ್ಪಮ್ಮನವರ ಅಭಿಪ್ರಾಯದಂತೆ ಶ್ರೀರಂಗದೇವರಾಯ ಮಹಾರಾಯರ ಅಪ್ಪಣೆ ಪ್ರಕಾರ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ನಂದ್ಯಾಲ ನಾರಾಯಣ ರಾಜರು ದೇವಾಲಯವನ್ನು ಕಟ್ಟಿಸಿದ ವಿಷಯವನ್ನು ಈ ಶಾಸನ ತಿಳಿಸುತ್ತದೆ. ಆನೆಗೊಂದಿ ನರಪತಿ ಸಂಸ್ಥಾನದ ಧೀಮಂತ ರಾಣಿಯಾಗಿದ್ದ ರಾಣಿ ಕುಪ್ಪಮ್ಮ ತನ್ನ ಗಂಡ ಕೃಷ್ಣದೇವರಾಯನ ಅಕಾಲಿಕ ಮರಣಾದ ನಂತರ ಬ್ರಿಟಿಷರ ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ಎಂಬ ನೀತಿಯನ್ನು ಧಿಕ್ಕರಿಸಿ ಸಂಸ್ಥಾನವನ್ನು ಉಳಿಸಿಕೊಳ್ಳಲು ತನ್ನ ತಮ್ಮ ಪಂಪಾಪತಿರಾಜುವನ್ನು ದತ್ತು ಪಡೆದು ಶ್ರೀರಂಗದೇವರಾಯನೆಂದು ನಾಮಕರಣ ಮಾಡಿ ಪಟ್ಟಕ್ಕೆ ಕೂರಿಸಿದ್ದರು.
ದಾನದ ವಿಚಾರ ಉಲ್ಲೇಖ:ಶ್ರೀರಂಗರದೇವರಾಯ ಅಪ್ರಾಪ್ತ ವಯಸ್ಕರಾಗಿದ್ದರಿಂದ ಮಗನ ಪರವಾಗಿ ಕುಪ್ಪಮ್ಮ ತಾನೇ ಆಡಳಿತ ನಡೆಸಿದಳು. ಆಡಳಿತ ನಡೆಸುತ್ತಿದ್ದ ಕುಪ್ಪಮ್ಮ ಹಲವು ದಾನ ಧರ್ಮಗಳನ್ನು ಮಾಡಿದ್ದಾರೆ. ಈಗಾಗಲೇ ರಾಣಿಯ ಹಲವು ಶಾಸನ ದೊರೆತಿವೆ. ಅವು ವಾಲ್ಮೀಕಿ ಜನಾಂಗದ ಗುರುತ್ವ ಧಾರಣೆಯನ್ನು ರಾಣಿ ವಹಿಸಿಕೊಂಡಿದ್ದರ ಬಗ್ಗೆ ತಿಳಿಸುತ್ತದೆ.
ಅಲ್ಲದೇ ಕಂಪ್ಲಿ ಕಲ್ಮಠಕ್ಕೆ ಹಂಪಿಯಲ್ಲಿ ದಾಸೋಹಕ್ಕಾಗಿ ಮಂಟಪವೊಂದನ್ನು ದಾನ ನೀಡಿದ ಬಗ್ಗೆ ತಿಳಿಸುತ್ತವೆ. ಪ್ರಸ್ತುತ ಶಾಸನ ದೇವಾಲಯ ನಿರ್ಮಾಣದ ಬಗ್ಗೆ ತಿಳಿಸುವುದರ ಮೂಲಕ ರಾಣಿ ಕುಪ್ಪಮ್ಮಳ ಕಾರ್ಯ ಚಟುವಟಿಕೆಗಳನ್ನು ಮತ್ತಷ್ಟು ತಿಳಿಯಲು ಸಹಾಯಕವಾಗಿದೆ ಎಂದು ಡಾ. ಶರಣಬಸಪ್ಪ ಕೋಲ್ಕಾರ್ ತಿಳಿಸಿದ್ದಾರೆ.
ಇದನ್ನೂ ಓದಿ :ಈಸೂರು ಗ್ರಾಮದಲ್ಲಿ ಆತ್ಮಬಲಿದಾನದ ಅಪರೂಪದ ಸೂರ್ಯಗ್ರಹಣ: ಕಲ್ಯಾಣ ಚಾಲುಕ್ಯರ ಶಾಸನ ಪತ್ತೆ