ಗಂಗಾವತಿ: ತಾಲೂಕಿನ ಚಿಕ್ಕಜಂತಕಲ್ ಬಳಿ ಇರುವ ಇಂದ್ರಾ ಸಾಲ್ವೆಂಟ್ ಪವರ್ ಪ್ಲಾಂಟ್ ಮೂಲಕ ಹಾರು ಬೂದಿ ಜನ ವಸತಿ ಪ್ರದೇಶಕ್ಕೆ ಹರಡುತ್ತಿದ್ದು, ಇದರಿಂದ ನಿತ್ಯ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಆಕ್ರೋಶಗೊಂಡ ಜನ ಘಟಕಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಇಂದ್ರಾ ಪವರ್ ಸಾಲ್ವಂಟ್ ಪ್ಲಾಂಟ್ನಿಂದ ಕಳೆದ ಹಲವು ವರ್ಷದಿಂದ ಹಾರು ಬೂದಿ ಕಿರಿಕಿರಿ ಇದೆ. ಈಗಾಗಲೆ ಸಾಕಷ್ಟು ಬಾರಿ ಮನವಿ ಮಾಡಿದರೂ ಮಾಲೀಕರು ಗಮನ ಹರಿಸಿಲ್ಲ. ಇದರಿಂದ ಸಾಮಾನ್ಯರ ಬದುಕು ದುಸ್ತರವಾಗಿದೆ ಎಂದು ಧರಣಿ ನಿರತರು ಆರೋಪಿಸಿದರು.
ಇಂದ್ರಾ ಸಾಲ್ವೆಂಟ್ ಪವರ್ ಪ್ಲಾಂಟ್ಗೆ ಬೀಗ ಸಂಸ್ಥೆಯ ಪ್ಲಾಂಟ್ ಮ್ಯಾನೇಜರ್ ದತ್ತಾತ್ರೇಯ ಶರ್ಮಾ ಎಂಬ ವ್ಯಕ್ತಿಯನ್ನು ಬಾಧಿತ ಮನೆಗಳಿಗೆ ಕರೆದೊಯ್ದು ತೋರಿಸಿದ ಜನರು, ಉದ್ಯಮ ಘಟಕ ಉಗುಳುತ್ತಿರುವ ಹೊಗೆಯೊಂದಿಗೆ ಬೂದಿ ಹಾರಿ ಬರುತ್ತಿದೆ. ಇದರಿಂದ ತೀವ್ರ ತೊಂದರೆಯಾಗುತ್ತಿದೆ ಎಂದು ವಿವರಿಸಿದರು.
ಬೂದಿ ಮನೆಯಂಗಳದಲ್ಲಿ ಹರಡುತ್ತಿದ್ದು, ವಾಹನಗಳು, ಒಣಗಲು ಹಾಕಿರುವ ಬಟ್ಟೆಗಳು, ಮನೆಯೊಳಗಿನ ಅಡುಗೆ ಪಾತ್ರೆಗಳು ಸೇರಿದಂತೆ ಎಲ್ಲೆವು ಕಪ್ಪಾಗುತ್ತಿವೆ. ಈ ಬಗ್ಗೆ ನಾಲ್ಕಾರು ಬಾರಿ ಘಟಕದ ಮಾಲೀಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಸಂಸ್ಥೆಯ ಮಾಲೀಕ ಸ್ಥಳಕ್ಕೆ ಆಗಮಿಸಬೇಕು. ಬೂದಿ ಹಾರದಂತೆ ಕಡ್ಡಾಯ ಕ್ರಮ ಕೈಗೊಂಡರೆ ಮಾತ್ರ ಸಂಸ್ಥೆ ಪುನಾರಂಭಕ್ಕೆ ಅವಕಾಶ ನೀಡುತ್ತೇವೆ ಎಂದು ನಾಗೇನಹಳ್ಳಿ, ಚಪ್ಪರದಳ್ಳಿ, ಚಿಕ್ಕಜಂತಕಲ್ ಹಾಗೂ ವೀನಭಾ ನಗರದ ಜನ ಎಚ್ಚರಿಕೆ ನೀಡಿದರು.