ಕೊಪ್ಪಳ: ಭಾರತದೊಂದಿಗೆ ಆಟವಾಡುತ್ತಿರುವ ಚೀನಾ ತನ್ನ ಚಾಳಿಯನ್ನು ಇದೇ ರೀತಿ ಮುಂದುವರಿಸಿದ್ರೆ ನಮ್ಮಿಂದ ಒದೆ ತಿಂದು ಹೋಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಚೀನಾ ಕಾಲು ಕೆರೆದು ಯುದ್ಧಕ್ಕೆ ಬಂದ್ರೆ ಭಾರತ ಸುಮ್ಮನೆ ಕೂರಲ್ಲ.. ಕೊಪ್ಪಳದಲ್ಲಿ ಮಾತನಾಡಿದ ಅವರು, ಭಾರತದ ಸೈನ್ಯ ಈಗಾಗಲೇ ಪಾಕಿಸ್ತಾನದ ಮಗ್ಗಲು ಮುರಿದಿದೆ. ಚೀನಾ ಆಟವಾಡುತ್ತಿದೆ, ತನ್ನ ಚಾಳಿಯನ್ನು ಹೀಗೆ ಮುಂದುವರೆಸಿದ್ರೆ ನಮ್ಮಿಂದ ಚೀನಾ ಒದೆ ತಿಂದು ಹೋಗುತ್ತದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ.
ನಮ್ಮ ಸೈನಿಕರ ಬಗ್ಗೆ ನಮಗೆ ವಿಶ್ವಾಸವಿದೆ. ಸೈನಿಕರಿಗೆ ಬೇಕಾದ ಶಸ್ತ್ರಾಸ್ತ್ರ, ಸ್ವಾತಂತ್ರ್ಯ ನೀಡಲಾಗಿದೆ. ಸೇನೆಯಲ್ಲಿ ಮೊದಲಿನ ಸ್ಥಿತಿ ಈಗ ಇಲ್ಲ. ಹೀಗಾಗಿ ನಮ್ಮ ಸೈನಿಕರೂ ತುಂಬಾ ವಿಶ್ವಾಸದಲ್ಲಿದ್ದಾರೆ. ಇಡೀ ದೇಶ ನಮ್ಮ ಸೈನಿಕರೊಂದಿಗಿದೆ. ಪಾಕಿಸ್ತಾನ, ಚೀನಾ ಮಾಡುವ ಕುತಂತ್ರಕ್ಕೆ ಭಾರತದ ಸೈನಿಕರು ತಕ್ಕ ಉತ್ತರ ನೀಡುತ್ತಾರೆ. ಇಡೀ ಪ್ರಪಂಚ ಭಾರತದ ಜೊತೆ ಇದೆ. ಸುಮ್ಮನೆ ನಾವು ಪಾಕಿಸ್ತಾನ, ಚೀನಾದ ತಂಟೆಗೆ ಹೋಗೋದಿಲ್ಲ. ಆದರೆ, ಪಾಕಿಸ್ತಾನ, ಚೀನಾ ಕಾಲು ಕೆರೆದು ಯುದ್ಧಕ್ಕೆ ಬಂದ್ರೆ ಸುಮ್ಮನೆ ಇರೋದಿಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರ ವಿಶ್ವದ ಮನಸು ಗೆದ್ದಿದ್ದಾರೆ. ಪಾಕಿಸ್ತಾನ, ಚೀನಾ ತಮ್ಮ ಚಾಳಿ ಮುಂದುವರೆಸಿದ್ರೆ ಅವರೂ ಅನುಭವಿಸಬೇಕಾಗುತ್ತದೆ ಎಂದರು. ನೇಪಾಳ ಭಾರತ ಸಹೋದರರಿದ್ದಂತೆ. ಹೊಂದಾಣಿಕೆ ಮಾಡಿಕೊಳ್ಳೋದಕ್ಕೆ ಏನೂ ತೊಂದರೆ ಇಲ್ಲ ಎಂದು ರಾಜನಾಥಸಿಂಗ್ ಅವರು ಈಗಾಗಲೇ ಹೇಳಿದ್ದಾರೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದರು.