ಕೊಪ್ಪಳ: ಮನುಷ್ಯನಿಗೆ ಬರುವ ಹಲವಾರು ಸೋಂಕುಗಳಲ್ಲಿ ಅನೇಕ ಕೆಲವುಗಳ ಹೆಸರು ಕೇಳುತ್ತಲೇ ಜನರು ಬೆಚ್ಚಿ ಬೀಳುತ್ತಾರೆ. ಅದರಲ್ಲೂ ಹೆಚ್‌ಐವಿ ಸೋಂಕು ಎಂದರೆ ಇನ್ನಷ್ಟು ಭಯ ಹುಟ್ಟಿಕೊಳ್ಳುತ್ತೆ. ಪರಿಸ್ಥಿತಿ ಹೀಗಿರುವಾಗ ಆಧುನಿಕ ಜೀವನ ಶೈಲಿ ಹಾಗೂ ಆಕರ್ಷಣೆಯಿಂದಾಗಿ ಅನೇಕರು ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಾರೆ. ಪ್ರಸಕ್ತ ದಿನಗಳಲ್ಲಿ ಹೆಚ್‌ಐವಿ/ಏಡ್ಸ್ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಂಡಿದೆಯಾದರೂ, ಕೊಪ್ಪಳ ಜಿಲ್ಲೆಯ ಎರಡು ಎಆರ್‌ಟಿ ಕೇಂದ್ರಗಳಲ್ಲಿ ನೋಂದಣಿಯಾಗಿರುವ ಸೋಂಕಿತರಲ್ಲಿ ಹದಿಹರೆಯದವರ ಸಂಖ್ಯೆ ಹೆಚ್ಚು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ಬಗ್ಗೆ ಕೊಪ್ಪಳ ಜಿಲ್ಲೆಯ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಶಶಿಧರ್ ಅವರು ಈಟಿವಿ ಭಾರತದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಏಡ್ಸ್ ಸೊಂಕಿತರ ಅಂಕಿ ಸಂಖ್ಯೆ: ಕೊಪ್ಪಳ ಜಿಲ್ಲೆಯ ಒಟ್ಟು 7 ತಾಲೂಕುಗಳ ಪೈಕಿ ಕೊಪ್ಪಳ ಮತ್ತು ಗಂಗಾವತಿಯಲ್ಲಿ ಸೋಂಕಿತರ ಚಿಕಿತ್ಸೆಗಾಗಿ ಎಆರ್‌ಟಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ಎರಡೂ ಕೇಂದ್ರಗಳಲ್ಲಿ ನೋಂದಣಿಯಾಗಿರುವ ರೋಗಿಗಳ ಸಂಖ್ಯೆ ಒಟ್ಟು 367 ಆಗಿದ್ದು, ಇದರಲ್ಲಿ ಮದುವೆಯಾಗದವರೂ ಇದ್ದಾರೆ. ಈ ಪೈಕಿ 18 ರಿಂದ 21 ವರ್ಷದೊಳಗಿನ 18 ಯುವಕರು, 35 ಯುವತಿಯರು, 21 ರಿಂದ 35 ವರ್ಷದೊಳಗಿನ 158 ಪುರುಷರು ಹಾಗೂ 67 ಮಹಿಳೆಯರು, 35 ರಿಂದ 45 ವರ್ಷದೊಳಗಿನ 32 ಜನ ಪುರುಷರು ಹಾಗೂ 10 ಜನ ಮಹಿಳೆಯರು ಸೋಂಕಿಗೆ ಒಳಗಾಗಿದ್ದಾರೆ ಎಂದು ಇಲಾಖೆಯ ಅಂಕಿ ಅಂಶಗಳು ಹೇಳುತ್ತಿವೆ.
ಲಿಂಗತ್ವ ಅಲ್ಪ ಸಂಖ್ಯಾತರಿಗೂ ಏಡ್ಸ್: ಕೇವಲ ಯುವಕ- ಯುವತಿಯರಿಗಲ್ಲದೇ ಲಿಂಗತ್ವ ಅಲ್ಪಸಂಖ್ಯಾತರಲ್ಲೂ ಏಡ್ಸ್ ಕಾಣಿಸಿಕೊಂಡಿದೆ. 21 ರಿಂದ 35 ವರ್ಷದೊಳಗಿನ 8 ಜನರಲ್ಲಿ ಹಾಗೂ 36 ರಿಂದ 45 ವರ್ಷದೊಳಗಿನ ಇಬ್ಬರು ಮಂಗಳಮುಖಿಯರು ಹೆಚ್‌ಐವಿ ಸೋಂಕಿತರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.