ಕರ್ನಾಟಕ

karnataka

ETV Bharat / state

ಕೊಪ್ಪಳ: ದಿನದಿಂದ ದಿನಕ್ಕೆ ಶಾಲಾ ಮಕ್ಕಳ ಹಾಜರಾತಿ ಏರಿಕೆ - koppal

ಶಾಲೆಗಳಲ್ಲಿ ದಿನದಿಂದ ದಿನಕ್ಕೆ ಮಕ್ಕಳ ಹಾಜರಾತಿ ಸಂಖ್ಯೆ ಹೆಚ್ಚಳವಾಗುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 1,384 ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಶಾಲೆಗಳು ಹಾಗೂ 310 ಪ್ರೌಢಶಾಲೆಗಳು ಪ್ರಾರಂಭವಾಗಿವೆ‌.

koppal
ಶಾಲಾ ಮಕ್ಕಳ ಹಾಜರಾತಿ ಏರಿಕೆ

By

Published : Jan 6, 2021, 5:35 PM IST

ಕೊಪ್ಪಳ: ಕೊರೊನಾ ಭೀತಿಯಿಂದ ಕಳೆದ 9 ತಿಂಗಳುಗಳಿಂದ ಮುಚ್ಚಿದ್ದ ಶಾಲೆಗಳು ಜ.1ರಿಂದ ಪುನಾರಂಭಗೊಂಡಿವೆ. ಕೊಪ್ಪಳ ಜಿಲ್ಲೆಯಲ್ಲಿಯೂ ಸಹ ವಿದ್ಯಾರ್ಥಿಗಳು ಶಾಲೆಗಳತ್ತ ಮುಖ ಮಾಡಿದ್ದಾರೆ. ದಿನದಿಂದ ದಿನಕ್ಕೆ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ.

ಶಾಲಾ ಮಕ್ಕಳ ಹಾಜರಾತಿ ಏರಿಕೆ: ಡಿಡಿಪಿಐ ದೊಡ್ಡಬಸಪ್ಪ ನೀರಲಕೇರಿ

ಕೋವಿಡ್​ ಭೀತಿಯ ನಡುವೆಯೂ ರಾಜ್ಯ ಸರ್ಕಾರ 6 ರಿಂದ 10 ನೇ ತರಗತಿಯ ಶಾಲೆಗಳನ್ನು ಪ್ರಾರಂಭಿಸಲು ಸೂಚನೆ ನೀಡಿದ ಹಿನ್ನೆಲೆ ಜ.1 ರಿಂದ ಶಾಲೆಗಳು ಪುನಾರಂಭಗೊಂಡಿವೆ. ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಶಾಲೆಗಳನ್ನು ಪ್ರಾರಂಭ ಮಾಡಲಾಗಿದೆ. ಆರಂಭದ ದಿನದಂದು ಶಾಲೆಗಳಲ್ಲಿ ಹಬ್ಬದ ವಾತಾವರಣದ ಮೂಲಕ ಶಿಕ್ಷಕರು ವಿದ್ಯಾರ್ಥಿಗಳನ್ನು ಬರಮಾಡಿಕೊಂಡಿದ್ದರು. ಮೊದಲ ದಿನ ಶಾಲೆಗೆ ಬಂದ ಮಕ್ಕಳ ಸಂಖ್ಯೆ ಕಡಿಮೆ ಇದ್ದರೂ ಸಹ ಮಕ್ಕಳು ಬರುತ್ತಾರೆ ಎಂಬ ಶಿಕ್ಷಕರ ನಿರೀಕ್ಷೆಗೆ ಮಕ್ಕಳು ಇದೀಗ ಸಾಥ್ ನೀಡುತ್ತಿದ್ದಾರೆ.

ಜಿಲ್ಲೆಯಲ್ಲಿ ಶಾಲೆಗಳಲ್ಲಿ ದಿನದಿಂದ ದಿನಕ್ಕೆ ಮಕ್ಕಳ ಹಾಜರಾತಿ ಸಂಖ್ಯೆ ಹೆಚ್ಚಳವಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 1,384 ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಶಾಲೆಗಳು ಹಾಗೂ 310 ಪ್ರೌಢಶಾಲೆಗಳು ಪ್ರಾರಂಭವಾಗಿವೆ‌. ಈ ಎಲ್ಲ ಶಾಲೆಗಳಲ್ಲಿ ಶಾಲೆಯ ಆರಂಭದ ದಿನದಂದು ಜಿಲ್ಲೆಯಾದ್ಯಂತ ಒಟ್ಟು ಶೇ 29 ರಷ್ಟು ಮಕ್ಕಳ ಹಾಜರಾತಿ ದಾಖಲಾಗಿತ್ತು. ಜ.5 ರಂದು ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ 6 ನೇ ತರಗತಿಯ 5,071 ವಿದ್ಯಾರ್ಥಿಗಳು, 7ನೇ ತರಗತಿಯ 10,110 ವಿದ್ಯಾರ್ಥಿಗಳು, 8ನೇ ತರಗತಿಯ 7,847 ವಿದ್ಯಾರ್ಥಿಗಳು ಹಾಗೂ 9ನೇ ತರಗತಿಯ 1,872 ವಿದ್ಯಾರ್ಥಿಗಳ ಹಾಜರಾತಿ ಇತ್ತು.

ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ 6 ರಿಂದ 9 ನೇ ತರಗತಿಯ ಒಟ್ಟು 1,05,119 ವಿದ್ಯಾರ್ಥಿಗಳ ದಾಖಲಾತಿ ಪೈಕಿ 24,900 ವಿದ್ಯಾರ್ಥಿಗಳ ಹಾಜರಾತಿ ಇತ್ತು. ಇನ್ನು ಎಸ್ಎಸ್ಎಲ್​ಸಿಯ ಒಟ್ಟು 21,913 ವಿದ್ಯಾರ್ಥಿಗಳ ದಾಖಲಾತಿ ಪೈಕಿ 8,865 ವಿದ್ಯಾರ್ಥಿಗಳು ಹಾಜರಾಗಿದ್ದು, ಶೇ 40.46 ರಷ್ಟು ಹಾಜರಾತಿ ಇದೆ.

ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಮಕ್ಕಳ ಹಾಗೂ ಶಿಕ್ಷಕರ ಸುರಕ್ಷತೆಯ ಬಗ್ಗೆ ಗಮನ ನೀಡಿರುವುದು ಮಕ್ಕಳ ಹಾಜರಾತಿ ಸಂಖ್ಯೆಯಲ್ಲಿ ಹೆಚ್ಚುತ್ತಿರುವುದಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದೊಡ್ಡಬಸಪ್ಪ ನೀರಲಕೇರಿ ತಿಳಿಸಿದ್ದಾರೆ.

ABOUT THE AUTHOR

...view details