ಕುಷ್ಟಗಿ (ಕೊಪ್ಪಳ):ನಾಳೆ ಕುಷ್ಟಗಿ ಪಟ್ಟಣದ ಮೇಲ್ಸೇತುವೆಯು ಲೋಕಾರ್ಪಣೆಯಾಗಲಿದ್ದು, ಪೂರ್ವಭಾವಿ ಸಿದ್ಧತೆ ನಡೆಸುವುದಕ್ಕೆ ಆಗಮಿಸಿದ್ದ ಓಎಸ್ಇ ಕಂಪನಿ ಯೋಜನಾ ವ್ಯವಸ್ಥಾಪಕ ರಾಮಪ್ಪ ಅವರಿಗೆ ಕೆಲ ಸಂಘಟಕಾರರು ತರಾಟೆಗೆ ತೆಗೆದುಕೊಂಡಿದ್ದಾರೆ.
ಕುಷ್ಟಗಿ ತಾಲೂಕಿನ ಕಡೆಕೊಪ್ಪ, ವಣಗೇರಾ ಕೆಳ ಸೇತುವೆ ಹಾಗೂ ಮೇಲ್ಸೇತುವೆ ಪಕ್ಕದ ಸರ್ವಿಸ್ ರಸ್ತೆಯನ್ನು ಅಭಿವೃದ್ಧಿ ಪಡಿಸಿಲ್ಲ. ಹೀಗಿರುವಾಗ ತರಾತುರಿಯಲ್ಲಿ ಮೇಲ್ಸೇತುವೆಯನ್ನು ಲೋಕಾರ್ಪಣೆಗೆ ಮುಂದಾಗಿರುವುದನ್ನು ಪ್ರಶ್ನಿಸಿದರು.
ನಾಳೆ ಕುಷ್ಟಗಿ ಮೇಲ್ಸೇತುವೆ ಲೋಕಾರ್ಪಣೆ ಲಾಕ್ಡೌನ್ ವೇಳೆ ಸರ್ವಿಸ್ ರಸ್ತೆಯನ್ನು ಅಭಿವೃದ್ಧಿ ಪಡಿಸಬಹುದಾಗಿತ್ತು. ಆದರೆ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ಆಕ್ಷೇಪಿಸಿದರು. ಕಳೆದ 7ವರ್ಷಗಳಿಂದ ಕೊಪ್ಪಳ ಸಂಸದರ ಗಮನಕ್ಕೆ ತಂದರೂ ವಣಗೇರಾ, ಕಡೇಕೊಪ್ಪ ಅಭಿವೃದ್ಧಿ ಪಡಿಸಿಲ್ಲ. ಕ್ಯಾದಿಗುಪ್ಪ ಕೆಳ ಸೇತುವೆ ನಿರ್ಮಿಸದೇ ಬಾಕಿ ಉಳಿಸಿದ್ದಾರೆ. ಈ ಅಧಿಕಾರಿಗಳು ಈಗ ಮಾತ್ರ ಸಿಗುತ್ತಿದ್ದು, ಅವರಿಂದಲೇ ಬಾಕಿ ಕೆಲಸದ ಲಿಖಿತ ಭರವಸೆ ನೀಡಬೇಕು. ಇಲ್ಲವಾದಲ್ಲಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕಪ್ಪುಪಟ್ಟಿ ಧರಿಸುವ ಎಚ್ಚರಿಕೆ ನೀಡಿದರು.
ಸಂಘಟನೆಕಾರರ ಒತ್ತಡಕ್ಕೆ ಮಣಿದ ರಾಮಪ್ಪ ಅವರು, ಇನ್ನೂ ಮೂರು ದಿನಗಳಲ್ಲಿ ಸರ್ವಿಸ್ ರಸ್ತೆ ಡಾಂಬರೀಕರಣ ಕೆಲಸ ಆರಂಭಿಸುವ ಭರವಸೆ ನೀಡಿದರು. ಇದೇ ವೇಳೆ ತಹಶೀಲ್ದಾರ ಎಂ. ಸಿದ್ದೇಶ ಆಗಮಿಸಿ ಬಾಕಿ ಕಾಮಗಾರಿಗಳನ್ನು ಪೂರ್ಣ ಗೊಳಿಸಲು ಸೂಚಿಸಿದರು. ಅಜ್ಜಪ್ಪ ಕರಡಕಲ್ಲ, ಕೃಷ್ಣಮೂರ್ತಿ ಟೆಂಗುಂಟಿ, ಬಾವುದ್ದೀನ್, ಬಾಳಪ್ಪ ಬೇವಿನಕಟ್ಟಿ, ಪುರಸಭೆ ಸದಸ್ಯರರಾದ ಜಿ.ಕೆ.ಹಿರೇಮಠ ಇದ್ದರು.